
ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಹಾಗೂ ನಾಗರಿಕ ಕ್ರಿಯಾ ಸಮಿತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಚಯಗಿರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಚ್ಛತೆಯನ್ನು ಕಾಪಾಡುವ ಮೂಲಕ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಪರಮ ಸ್ಟುಡಿಯೋ ಬೆಂಗಳೂರು ಇದರ ಮಾರ್ಕೆಟಿಂಗ್ ಮುಖ್ಯಸ್ಥೆ ಸಿಂಧೂರ ಟಿ.ಪಿ. ಪ್ರಧಾನ ಭಾಷಣ ಮಾಡಿದರು. ಸ್ವಾತಂತ್ರ್ಯದ ಪರಿಕಲ್ಪನೆ ಕಾಲಕ್ರಮೇಣ ಬದಲಾಗಿದ್ದು, ಮಕ್ಕಳಿಗೆ ತಮ್ಮ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಜೀವನ ರೂಪಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸ್ಥಳೀಯ ಮಕ್ಕಳೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ಅದಕ್ಕಾಗಿ ಅವರಿಗೆ ಅಗತ್ಯವಾದ ಅವಕಾಶಗಳು ಹಾಗೂ ವೇದಿಕೆಗಳನ್ನು ನಿರ್ಮಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಉಳ್ಳಾಲದ ರಾಣಿ ಅಬ್ಬಕ್ಕ, ಡಾ. ಅಮ್ಮೆಂಬಳ ಬಾಳಪ್ಪ ಹಾಗೂ ಕಾರ್ನಾಡು ಸದಾಶಿವ ರಾಯರ ಸ್ವಾತಂತ್ರ್ಯ ಹೋರಾಟವನ್ನು ನೆನೆಪಿಸಿದ ಅವರು ಅಂತಹ ಮಹನೀಯರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಾಗರಿಕ ಕ್ರಿಯಾ ಸಮಿತಿಯ ಕೋಶಾಧಿಕಾರಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಮಾತನಾಡಿದರು. ಸಮಿತಿಯ ಗೌರವಾಧ್ಯಕ್ಷ ನರಸಿಂಹ ರಾಜ ಹೊಳ್ಳ, ಉಪಾಧ್ಯಕ್ಷೆ ತಾಯಮ್ಮ, ಕಾರ್ಯದರ್ಶಿ ಧನಂಜಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ದಾಮೋದರ ಸಂಚಯಗಿರಿ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
Advertisement







