
ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳ ಚಿನ್ನದ ಸರ ಕಳ್ಳತನ ನಡೆಸಿದ ಘಟನೆ ಭಾನುವಾರ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮೀ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಸರ ಕಳ್ಳತನ ಮಾಡಿದ ಬಳಿಕ ಮಹಿಳೆ ಕಲ್ಯಾಣ ಮಂಟಪದಿಂದ ಕಾಲ್ಕಿತ್ತಿದ್ದಾಳೆ.
ಭಾನುವಾರ ಬಂಟ್ವಾಳ ದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮೀ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಇತ್ತು. ಈ ಸಂದರ್ಭ ಸಲ್ವಾರ್ ಧರಿಸಿಕೊಂಡು ಬಂದಿದ್ದ ಮಹಿಳೆಯೊಬ್ಭಳು ಅಲ್ಲಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಸರಕಳ್ಳತನಕ್ಕೆ ಇಳಿದಿದ್ದಳು. ಬಾಲಕಿಯೊಬ್ಬಳ ಕತ್ತಿನಲ್ಲಿ ಇರುವೆ ಇದೆ ಎಂದು ಹೇಳಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾಳೆ. ಈ ಸಂದರ್ಭ ಬಾಲಕಿ ಈ ವಿಷಯವನ್ನು ತನ್ನ ಅಕ್ಕನಲ್ಲಿ ತಿಳಿಸಿದ್ದು ಅಕ್ಕ ಮನೆಮಂದಿಗೆ ತಿಳಿಸುವ ವೇಳೆ ಕಳ್ಳಿ ಕಲ್ಯಾಣ ಮಂಟಪದಿಂದ ಪರಾರಿಯಾಗಿದ್ದಾಳೆ. ಸುದ್ದಿ ಮದುವೆ ಹಾಲ್ ನಲ್ಲಿ ಹರಿದಾಡುತ್ತಿದ್ದಂತೆಯೇ ಪೋಷಕರು ತಮ್ಮ ಮಕ್ಕಳ ಚಿನ್ನಾಭರಣವನ್ನು ಪರಿಶೀಲಿಸಿದಾಗ ಇನ್ನೊರ್ವ ಬಾಲಕನ ಕತ್ತಿನಿಂದ ಸರ ಎಗರಿಸಿರುವುದು ಬೆಳಕಿಗೆ ಬಂದಿದೆ. ಮತ್ತೋರ್ವ ಬಾಲಕನ ಕತ್ತಿಗೆ ಕೈ ಹಾಕುವಾಗ ಆತ ಆಕೆಯನ್ನು ತಳ್ಳಿರುವುದಾಗಿ ಘಟನೆ ಬೆಳಕಿಗೆ ಬಂದ ಬಳಿಕ ಪೋಷಕರಲ್ಲಿ ಹೇಳಿಕೊಂಡಿದ್ದು ಮಹಿಳೆ ಬಿಳಿ ವಸ್ತ್ರದ ಚೂಡಿದಾರ ಧರಿಸಿರುವುದಾಗಿ ತಿಳಿಸಿದ್ದಾನೆ. ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Advertisement







