
ಬಂಟ್ವಾಳ: ರೋಟರಿ ಕ್ಲಬ್ ಆಫ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇದರ ನೂತನ ಅಧ್ಯಕ್ಷೆ ಗೀತಾ ಬಳ್ಳಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲೊರೆಟ್ಟೊ ಪದವಿನ ಗ್ರೀನ್ ಸಿಟಿಯಲ್ಲಿರುವ ರೋಟರಿ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷೆಯಾಗಿ ಗೀತಾ ಬಳ್ಳಾಲ್, ಕಾರ್ಯದರ್ಶಿಯಾಗಿ ರೂಪವಾಣಿ ಶೆಟ್ಟಿ, ಕೋಶಾಧಿಕಾರಿಯಾಗಿ ರಮೇಶ್ ನಾಯಕ್ ರಾಯಿ ಸಹಿತ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ಪೂರ್ವ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಮಾತನಾಡಿ ಇಲ್ಲಿನ ಸದಸ್ಯರ ಟೀಮ್ ಸ್ಪಿರಿಟ್ ಉತ್ತಮವಾಗಿದೆ. ಪ್ರತಿ ಕ್ಲಬ್ ನಲ್ಲೂ ತಂಡ ಸ್ಪೂರ್ತಿ ಅತೀ ಮುಖ್ಯ. ಅದಕ್ಕಾಗಿ ಒಂದು ಉತ್ತಮ ವಾತವರಣವನ್ನು ಕ್ಲಬ್ ನಲ್ಲಿ ನಿರ್ಮಿಸಬೇಕು. ನಾವು ಏನೇ ಕಾರ್ಯಕ್ರಮ ಮಾಡುವುದಿದ್ದರೂ ಜನರಿಗೆ ಅದರಿಂದ ಉಪಯೋಗ ಆಗಬೇಕು ಎಂದರು.

ಸಹಾಯಕ ಗವರ್ನರ ಶೃತಿ ಮಾಡ್ತ ಮಾತನಾಡಿ ವಿಜಯ ಫೆರ್ನಾಂಡೀಸ್ ಅವರ ಅವಧಿಯಲ್ಲಿ ಉತ್ತಮ ಕಾರ್ಯಗಳು ನಡೆದು ಡೈಮಂಡ್ ಪ್ಲಸ್ ಪ್ರಶಸ್ತಿ ಬಂದಿದೆ. ಗೀತಾ ಬಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ಈ ಕ್ಲಬ್ ಅತ್ಯುತ್ತಮ ಸ್ಥಾನಕ್ಕೆ ತಲುಪಲಿದೆ ಎಂದರು. ವಲಯ ಸೇನಾನಿ ಗಣೇಶ್ ಶೆಟ್ಟಿ ಮಾತನಾಡಿ ಕ್ಲಬ್ ನ ಎಲ್ಲಾ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷೆ ಗೀತಾ ಬಳ್ಳಾಲ್ ಮಾತನಾಡಿ ಇದು ತನಗೆ ಅನಿರೀಕ್ಷಿತವಾಗಿ ಬಂದ ಅವಕಾಶ. ಎಲ್ಲ ಸದಸ್ಯರ ಸಹಕಾರದೊಂದಿಗೆ ಕ್ಲಬಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ನಿರ್ಗಮನ ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಮಾತನಾಡಿ ತನ್ನ ಅವಧಿಯಲ್ಲಿ ಸದಸ್ಯರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ನೂತನ ಸದಸ್ಯರನ್ನು ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು. ನಿರ್ಗಮನ ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಹಾಗೂ ನಿರ್ಗಮನ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ಅವರನ್ನು ಗೌರವಿಸಲಾಯಿತು. ಸಮಾಜ ಸೇವಕರಾದ ಅರ್ಜುನ್ ಭಂಡಾರ್ಕರ್, ರಾಜೇಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲಕ್ಷ್ಮೀ ಅವರ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲಾಯಿತು. ರಾಯಿ ಶಾಲೆಯ ಗೌರವ ಶಿಕ್ಷಕಿಗೆ ಗೌರವ ಧನ ಹಸ್ತಾಂತರಿಸಲಾಯಿತು.
ಸ್ಫಾಪಕಾಧ್ಯಕ್ಷ ಅವಿಲ್ ಮಿನೇಜಸ್ ಶುಭ ಹಾರೈಸಿದರು.
ನಿಕಟಪೂರ್ವಾಧ್ಯಕ್ಷ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ವರದಿ ವಾಚಿಸಿದರು. ಕಾರ್ಯದರ್ಶಿ ರೂಪಾವಾಣಿ ಶೆಟ್ಟಿ ವಂದಿಸಿದರು. ಸದಸ್ಯ ನೆಲ್ಸನ್ ಮೋನಿಸ್ ಹಾಗೂ ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.


Advertisement







