
ಬಂಟ್ವಾಳ: ನಾವು ತಿನ್ನುವ ಆಹಾರವೇ ನಮ್ಮ ದೇಹಕ್ಕೆ ಔಷಧಿಕಾಗಿ ಪರಿವರ್ತನೆಯಾದರೆ ಪ್ರತ್ಯೇಕ ಔಷಧಿಯ ಅಗತ್ಯವಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪೌಷ್ಠಿಕ ಆಹಾರ ಸೇವನೆ ಅಗತ್ಯ. ಆ ಮೂಲಕ ಸ್ವಾಸ್ಥ್ಯ ವ್ಯಕ್ತಿಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್.ಭೂಮರಡ್ಡಿ ಹೇಳಿದರು.

ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ ಕ್ಷಯ ರೋಗಿಗಳಿಗೆ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷಯ ರೋಗಿಗಳು ಪೌಷ್ಠಿಕ ಆಹಾರವನ್ನು ಹೆಚ್ಚು ಸೇವಿಸಿದಾಗ ಅವರು ರೋಗ ಮುಕ್ತರಾಗಿ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದರು.
ಪುದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು., ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಧಾನ ಮಂತ್ರಿಯವರ ಆಶಯದಂತೆ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೇವಾಂಜಲಿ ಸಂಸ್ಥೆ ನೀಡುತ್ತಿರುವುದು ಅಭಿನಂದನೀಯ. ಸ್ವಾರ್ಥ ರಹಿತ ಮನೋಭಾವದ ಕೃಷ್ಣ ಕುಮಾರ್ ಪೂಂಜ ನಮ್ಮಗ್ರಾಮದಲ್ಲಿರುವುದು ನಮ್ಮ ಹೆಮ್ಮೆ ಎಂದು ತಿಳಿಸಿದರು.



ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಅರ್ಜುನ್ ಪೂಂಜ ಉಪಸ್ಥಿತರಿದ್ದರು. ಪದ್ಮನಾಭ ಶೆಟ್ಟಿ ಪುಂಚಮೆ, ನಾರಾಯಣ ಬಡ್ಡೂರು, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಶಾಂತ್ ತುಂಬೆ, ಮೋಹನ್ ಬೆಂಜನಪದವು, ಶಿವರಾಜ್ ಸುಜೀರ್, ಮಧುರಾಜ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
Advertisement







