

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು ಇಲ್ಲಿನ ಪ್ರೌಢಶಾಲಾ ವಿಭಾಗದ ಕೊಠಡಿಯೊಂದು ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಯಾಗಿದೆ. ಈ ಕೊಠಡಿಯೊಳಗೆ ಪ್ರವೇಶೀಸುತ್ತಿದ್ದಂತೆಯೇ ನೂರಾರು ಬಣ್ಣದ ಚಿತ್ರಗಳು, ವ್ಯಕ್ತಿ ಚಿತ್ರಗಳು, ಗಣ್ಯರ ಮೂರ್ತಿಗಳು, ಮುಖವಾಡ, ಗೂಡುದೀಪ ಸಹಿತ ವಿವಿಧ ಬಗೆಯ ಕಲಾಕೃತಿಗಳು ನಮ್ಮ ಗಮನ ಸೆಳೆಯುತ್ತದೆ. ಕಳೆದ 23 ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳು ರಚಿಸಿದ ನೂರಾರು ಚಿತ್ರಕಲೆಗಳು ಇಲ್ಲಿವೆ. ಶಾಲೆಯ ಚಿತ್ರಕಲಾ ಶಿಕ್ಷಕ ಮುರಳೀಕೃಷ್ಣ ರಾವ್ ಕೆ.ಇದರ ಹಿಂದಿರುವ ಪ್ರೇರಕ ಶಕ್ತಿ.
ಮುರಳಿಕೃಷ್ಣ ರಾವ್ ಅವರು 23 ವರ್ಷಗಳಿಂದ ವಾಮದಪದವು ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಅವರಿಗೆ ಮಾರ್ಗದರ್ಶನ ಮಾಡಿದ ಪರಿಣಾಮ ಇಂದು ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಚಿತ್ರಿಸಿದ ಒಂದೊಂದು ಚಿತ್ರಗಳು ಪರಿಣಿತ ಕಲಾವಿದರನ್ನು ಮೀರಿಸುವಂತಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ನಾಲ್ವಡಿ ಕೃಷ್ಣರಾಜ ಒಡೆಯರ್, ರತನ್ ಟಾಟ ಮತ್ತಿತರ ಗಣ್ಯರ ಶಿಲ್ಪಗಳು, ಜಾಕಿಚಾನ್, ಚಾರ್ಲಿಚಾಪ್ಲಿನ್ ಮೊದಲಾದ ಅನೇಕ ಗಣ್ಯರ ಭಾವಚಿತ್ರಗಳು, ಪ್ರಕೃತಿ, ಪರಿಸರದ ಚಿತ್ರಗಳು ವಿದ್ಯಾರ್ಥಿಗಳ ಕುಂಚದಲ್ಲಿ ಆಕರ್ಷಕವಾಗಿ ಪಡಿಮೂಡಿದೆ.


ಶಿಕ್ಷಣ ಸಚಿವರಿಂದ ಮೆಚ್ಚುಗೆ:
ಮುರಳೀಕೃಷ್ಣ ರಾವ್ ಅವರ ಶಿಷ್ಯರ ಚಿತ್ರಗಳು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಂದಲೇ ಭೇಷ್ ಎನಿಸಿಕೊಂಡಿದೆ. ೨೦೧೮-೧೯ನೇ ಶೈಕ್ಷಣಿಕ ವರ್ಷದಲ್ಲಿ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡದ ಉದ್ಘಾಟನೆಗೆ ಆಗಮಿಸಿದ್ದ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಚಿತ್ರಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ವಿದ್ಯಾರ್ಥಿಯೋರ್ವ ರಚಿಸಿದ ತನ್ನದೇ ಭಾವಚಿತ್ರಕ್ಕೆ ಸಹಿ ಹಾಕುವ ಮೂಲಕ ಶಹಭಾಷ್ ಎಂದಿದ್ದರು.


ಕಲಾಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆ
ಚಿತ್ರಕಲಾ ಶಿಕ್ಷಕ ಮುರಳಿಕೃಷ್ಣ ರಾವ್ ಅವರ ಗರಡಿಯಲ್ಲಿ ಪಳಗಿದ ವಾಮದಪದವು ಸರಕಾರಿ ಪ್ರೌಢಶಾಲೆಯ ಅನೇಕ ಮಂದಿ ವಿದ್ಯಾರ್ಥಿಗಳು ಇಂದು ಪೂರ್ಣಕಾಲಿಕವಾಗಿ ತೊಡಗಿಸಿಕೊಂಡು ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವುದು ಹೆಮ್ಮೆಯ ಸಂಗತಿ. ಸುಮಾರು ೯ ಮಂದಿ ವಿದ್ಯಾರ್ಥಿಗಳು ಇಂದು ಚಿತ್ರಕಲಾ ಶಿಕ್ಷಕರಾಗಿ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಅನೇಕ ಮಂದಿ ವಿದ್ಯಾರ್ಥಿಗಳು ಚಿತ್ರಕಲಾ ಕ್ಷೇತ್ರದಲ್ಲಿಯೇ ಉನ್ನತ ವ್ಯಾಸಂಗ ನಡೆಸಿ ಚಿತ್ರಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಮರಳೀಧರ ರಾವ್ ತನ್ನ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ
ಚಿತ್ರಯಾನಕ್ಕೆ 25ರ ಸಂಭ್ರಮ
ವಾಮದಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರ ಮತ್ತಿತರ ಕಲಾಕೃತಿಗಳನ್ನು ಪ್ರತೀ ವರ್ಷ ‘ಚಿತ್ತಾರ’ ಎನ್ನುವ ಕಾರ್ಯಕ್ರಮ ಸಂಘಟಿಸಿ ಪ್ರದರ್ಶನಕ್ಕಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಚಿತ್ರಪ್ರದರ್ಶನ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರ ವೀಕ್ಷಣೆಗೆಂದೆ ಚಿತ್ರಪ್ರೇಮಿಗಳು ಆಗಮಿಸುತ್ತಾರೆ. 2027ಕ್ಕೆ ಚಿತ್ರಕಲಾ ಯಾನಕ್ಕೆ 25 ಸಂವತ್ಸರ ತುಂಬಲಿದೆ. ಈ ಸವಿ ನೆನಪನ್ನು ಸ್ಮರಣೀಯಗೊಳಿಸುವ ಯೋಜನೆಯೂ ಮರಳೀಕೃಷ್ಣ ರಾವ್ ಅವರಿಗಿದೆ.




23 ವರ್ಷಗಳಿಂದ ವಾಮದಪದವು ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದ ಪರಿಣಾಮ ಇಂದು ಅನೇಕ ಮಂದಿ ವಿದ್ಯಾರ್ಥಿಗಳಿ ಇದೇ ಕ್ಷೇತ್ರದಲ್ಲಿ ಅವರ ಭವಿಷ್ಯ ಕಂಡು ಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಉತ್ತಮ ಚಿತ್ರಕಲಾವಿದರಾಗಿ ರೂಪುಗೊಂಡಿರುವುದು ಸಂತೋಷ ನೀಡಿದೆ- ಮುರಳೀಕೃಷ್ಣ ರಾವ್, ಚಿತ್ರಕಲಾ ಶಿಕ್ಷಕರು, ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ)


Advertisement







