
ಬಂಟ್ವಾಳ: ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಾಗ ರೋಗಗಳು ನಿಯಂತ್ರಣವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪೌಷ್ಠಿಕಾಂಶದ ಆಹಾರ ಸೇವನೆ ಅಗತ್ಯ. ಕ್ಷಯ ರೋಗ ಕೆಮ್ಮು, ಕಫ ಮಾತ್ರವಲ್ಲದೆ ದೇಹದ ಯಾವ ಭಾಗಕ್ಕೂ ಬಾಧಿಸುವ ಸಾಧ್ಯತೆ ಇದೆ. ಪ್ರಸ್ತುತ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ, ಆದರೆ ಕ್ಷಯ ರೋಗ ಸಂಪೂರ್ಣ ನಿರ್ಮೂಲನವಾಗಿಲ್ಲ ಎಂದು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕ್ಷಯರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಕ್ಷಯ ರೋಗ ಪೀಡಿತರನ್ನು ಗುರುತಿಸಿ ಅವರ ರೋಗ ಗುಣಮುಖವಾಗಲು ಉಚಿತವಾಗಿ ಪೌಷ್ಟಿಕಾಹಾರ ನೀಡುವ ಸೇವಾಂಜಲಿಯ ಕಾರ್ಯ ದೇವರು ಮೆಚ್ಚುವ ಕೆಲಸ ಎಂದರು. ಕ್ಷಯ ರೋಗೀಗಳು ದೃತಿಗೆಡದೆ ರೋಗಗುಣಮುಖವಾಗುವ ನಿಟ್ಟಿನಲ್ಲಿ ಸಕಾಲದಲ್ಲಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸುವಂತೆ ತಿಳಿಸಿದರು.


ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 39 ತಿಂಗಳಿನಿಂದ ನಿರಂತರವಾಗಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸಿದ್ದು ಒಟ್ಟು 12 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್,
ಪ್ರತಾಪ್ ಆಳ್ವ ಸುಜೀರುಗುತ್ತು, ಕ್ಷಯ ಪ್ರಯೋಗ ಶಾಲಾ ಹಿರಿಯ ಮೇಲ್ವಿಚಾರಕ ಡೇವಿಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಪ್ರಶಾಂತ್ ತುಂಬೆ, ನಾರಾಯಣ ಬೆಳ್ಚಾಡ ಬಡ್ಡೂರು, ಮೋಹನ್ ಬೆಂಜನಪದವು, ಸುರೇಶ್,
ಅಮಿತ್ ಮಾರ್ಲ, ಮಧುರಾಜ್ ಶೆಟ್ಟಿ ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆ ಶರ್ಮಿಳಾ ಕೆ. ಕಾರ್ಯಕ್ರಮ ನಿರೂಪಿಸಿದರು.


Advertisement







