
ಬಂಟ್ವಾಳ: ಭಾಷೆ ಹುಟ್ಟುವ ಮೊದಲೇ ಚಿತ್ರಕಲೆ ಹುಟ್ಟಿದೆ. ನಾಗರೀಕತೆಯ ಪ್ರಾರಂಭದ ಹಂತದಲ್ಲಿ, ಶಿಲಾಯುಗದ ಕಾಲದಲ್ಲಿ ಚಿತ್ರಕಲೆಯ ಮೂಲಕ ಅಭಿಪ್ರಾಯವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಏರ್ಯ ಆಳ್ವ ಫೌಂಡೇಶನ್ ಮೊಡಂಕಾಪು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಶತಮಾನೋತ್ಸವ ದ ಪ್ರಯುಕ್ತ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ನಡೆದ 3ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣಾಂಜಲಿಯನ್ನು ಉದ್ಘಾಟಿಸಿ ಮಾತನಾಡಿದರು. ಪರಿಸರ ಸಂರಕ್ಷಣೆ ನಮ್ಮೆಲರ ಜವಾಬ್ದಾರಿಯಾಗಬೇಕು ಎಂದ ಅವರು ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಸರಸ್ವತಿಯ ಆರಾಧಕರು, ನಡೆದಾಡುವ ಜ್ಞಾನ ಭಂಡಾರವಾಗಿದ್ದರು ಎಂದರು.


ನಿವೃತ್ತ ಚಿತ್ರಕಲಾ ಶಿಕ್ಷಕ ಎಚ್.ಎನ್.ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಚಿತ್ರಕಲೆ, ಸಂಗೀತ, ಭರತನಾಟ್ಯ, ಭಜನೆ ಮೊದಲಾದ ತರಬೇತಿ ನಡೆಯುತ್ತಿದ್ದು ಈ ಭಾಗದ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಸೇವಾಂಜಲಿಯ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು.ಟ್ರಸ್ಟಿ ತಾರಾನಾಥ ಕೊಟ್ಟಾರಿ ತೇವು ವಂದಿಸಿದರು. ಶಿಕ್ಷಕಿ ಕವಿತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಅರ್ಜುನ್ ಪೂಂಜ, ಸುಕೇಶ್ ಶೆಟ್ಟಿ ತೇವು, ಪ್ರಶಾಂತ್ ತುಂಬೆ ಮತ್ತಿತರರು ಸಹಕರಿಸಿದರು.


ಮೂರು ವಿಭಾಗಗಳಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಐನ್ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Advertisement







