
ಬಂಟ್ವಾಳ: ಸಜೀಪನಡು ಗ್ರಾಮದಲ್ಲಿ ದಾರಿದೀಪ ದುರಸ್ತಿ, ಚರಂಡಿ ಹೂಳೆತ್ತುವ ಬಗ್ಗೆ ಮಾಡಿದ ಮನವಿಗೆ ಪಂಚಾಯತಿ ನಿರ್ಲಕ್ಷ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಪಂಚಾಯತಿನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಮಹಮ್ಮದ್ ನಾಸೀರ್ ಪಂಚಾಯತಿ ಕಚೇರಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿದ್ದಾರೆ.


ಪಂಚಾಯತಿಯ ಜಗಲಿಯಲ್ಲಿಯೇ ಚಾಪೆ ಹಾಸಿ ಧರಣಿ ಆರಂಭಿಸಿರುವ ಮಹಮ್ಮದ್ ನಾಸೀರ್ ಬೇಡಿಕೆ ಈಡೇರುವ ವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ.


ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಜೀಪ ನಡು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ದಾರಿದೀಪ ದುರಸ್ತಿ ಹಾಗೂ ಚರಂಡಿ ಹೂಳೆತ್ತುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಇಲ್ಲಿನ ದಾರಿ ದೀಪದ ವ್ಯವಸ್ಥೆ ತೀರಾ ಕೆಟ್ಟದಾಗಿದೆ. ಇತ್ತೀಚೆಗೆ ದೇರಾಜೆ ಪರಿಸರದಲ್ಲಿ ಅಹಿತಕರ ಘಟನೆ ನಡೆದಿದ್ದು ಪೊಲೀಸ್ ಠಾಣೆಯಿಂದ ಸೂಚನೆ ಬಂದ ಬಳಿಕ 3 ದಾರಿ ದೀಪಗಳನ್ನು ದುರಸ್ತಿ ಮಾಡಲಾಗಿದೆ. ಇತರ ಭಾಗಗಳಲ್ಲೂ ಬೀದಿ ದೀಪ ದುರಸ್ತಿ ಪಡಿಸುವಂತೆ 2 ಬಾರಿ ಅಧ್ಯಕ್ಷರು ಹಾಗೂ ಪಿಡಿಓ ಅವರಿಗೆ ಮನವಿ ನೀಡಿದರೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ದಾರಿದೀಪ ದುರಸ್ತಿ ಆಗದ ಕಾರಣ ರಾತ್ರಿ ವೇಳೆ ಮದರಸಗಳಿಂದ ಹಾಗೂ ಟ್ಯೂಷನ್ ನಿಂದ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದೆಡೆ ಮಳೆಗಾಲ, ಇನ್ನೊಂದೆಡೆ ಕತ್ತಲು ತುಂಬಿದ ಪರಿಸರದಲ್ಲಿ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಪಂಚಾಯತಿ ದುರಾಡಳಿತ ಹಾಗೂ ನಿರ್ಲಕ್ಷದ ವಿರುದ್ಧ ಜಿ.ಪಂ ಮುಖ್ಯ ಕಾರ್ಯದರ್ಶಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.

Advertisement







