
ಬಂಟ್ವಾಳ: ಖ್ಯಾತ ಸಾಹಿತಿ, ಚಿಂತಕ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಾಬ್ದಿ ಕಾರ್ಯಕ್ರಮಕ್ಕೆ ಆಗಸ್ಟ್ 28ರಂದು ಚಾಲನೆ ನೀಡುವುದಾಗಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಹಾಗೂ ಏರ್ಯ ಬಾಲಕೃಷ್ಣ ಹೆಗ್ಡೆ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ, ಸಹಕಾರ, ಕೃಷಿ, ಸಹಿತ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು 1926 ಮಾರ್ಚ್ 19ರಂದು ಜನಿಸಿದ್ದು ಮುಂದಿನ 2026ಕ್ಕೆ ಜನ್ಮಶತಮಾನೋತ್ಸವ ವರ್ಷವಾಗಲಿದೆ. ಈ ನಿಟ್ಟಿನಲ್ಲಿ ಅವರ 100ನೇ ಜನ್ಮದಿನದ ಸವಿನೆನೆಪಿಗಾಗಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ಮರಣೀಯಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆ. 28ರಂದು ಗುರುವಾರ ಏರ್ಯಬೀಡಿನಲ್ಲಿ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮುಂದಿನ ಒಂದು ವರ್ಷಗಳ ಕಾಲ ಏರ್ಯ ಅವರ ನೆನೆಪಿನ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ:
ಏರ್ಯ ಜನ್ಮಶತಮಾನೋತ್ಸವದ ಕಾರ್ಯಕ್ರಮದ ಪೂರ್ವಭಾವಿಯಾಗಿ ಜುಲೈ 27ರಂದು ಏರ್ಯಬೀಡುವಿನಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ನಡೆಯಲಿದೆ. ಆ ದಿನ ಬೆಳಿಗ್ಗೆ 9ಕ್ಕೆ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರ ಪತ್ನಿ ಆನಂದಿ ಎಲ್.ಆಳ್ವ ದೀಪ ಪ್ರಜ್ವಲಿಸುವರು, ಏರ್ಯ ಬಾಲಕೃಷ್ಣ ಹೆಗ್ಡೆ ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಂ ಪೂಜಾರಿ, ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಹೊಟೇಲ್ ಉದ್ಯಮಿ ಚಂದ್ರಹಾಸ ಡಿ. ಶೆಟ್ಟಿ, ಮಂಡಡ್ಕಗುತ್ತು ಯಜಮಾನರಾದ ರತ್ನಾಕರ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಅಮ್ಟಾಡಿ ಗ್ರಾ.ಪಂ. ವಿಜಯಕುಮಾರ್ ಭಾಗವಹಿಸುವರು. ಕೇಶವ ಎಚ್. ಕಟೀಲು ಏರ್ಯರ ನೆನೆಪು ವಿಷಯವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮದಂಗವಾಗಿ ನಿವೃತ್ತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಓದುವ ಹವ್ಯಾಸ, ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ ಚಿತ್ರಕಮ್ಮಟ, ಶಿಕ್ಷಕ ವಿಠಲ ನಾಯಕ್ ಕಲ್ಲಡ್ಕ ಮಕ್ಕಳ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 12.45ರಿಂದ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Advertisement







