
ಬಂಟ್ವಾಳ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಅವರ ಮುಂದಾಳತ್ವದಲ್ಲಿ ದಾನಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬಕ್ಕೆ ನಿರ್ಮಾಣಗೊಂಡ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.
ಬೆಳಿಗ್ಗೆ ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಿ ಆಶೀರ್ವಚನ ನೀಡಿದರು. ಇದೊಂದು ಮಾದರಿ ಸೇವಾ ಕಾರ್ಯವಾಗಿದ್ದು ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಬಡಕುಟುಂಬಗಳು ಇದ್ದು ಅವರನ್ನು ಗುರುತಿಸಿ ಅವರಿಗೆ ಸೂರು, ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯ ಆಗಬೇಕಾಗಿದೆ. ದೇವಪ್ಪ ಕುಲಾಲ್ ಅವರು ಬಡಕುಟುಂಬಕ್ಕೆ ಆಸರೆಯಾಗಿ ಮನೆ ನಿರ್ಮಿಸಿಕೊಟ್ಟಿರುವುದು ಶ್ರೇಷ್ಠ ಕಾರ್ಯ ಎಂದರು. ಈ ಸಂದರ್ಭ ಸ್ವಾಮೀಜಿಗಳು ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಿದರು.



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ
ದಿನೇಶ್, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ಬಂಟ್ವಾಳ ತಾಲೂಕು ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ, ಪಂಜಿಕಲ್ಲು ಗ್ರಾ.ಪಂ. ಪಂಚಾಯತಿ ಅಧ್ಯಕ್ಷೆ ನಳಿನಿ ಪ್ರಸಾದ್ ಗಾಣಿಗ, ಮೆಸ್ಕಾಂ ಜೆಇ ತಿಲಕ್, ಯೋಜನಾಧಿಕಾರಿ ಜಯಾನಂದ, ಮೇಲ್ವಿಚಾರಕ ಬಾಬು, ಲಯನ್ಸ್ ಕ್ಲಬ್ ಕೋಶಾಧಿಕಾರಿ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.


ಮನೆ ನಿರ್ಮಾಣದ ರೂವಾರಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು, ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ವಂದಿಸಿದರು.
ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಕಳೆದ ೧೦ ವರ್ಷಗಳಿಂದ ಸೋಮಶೇಖರ್ ಹಾಗೂ ಸುಶೀಲ ದಂಪತಿ ಹಂದಿ ಸಾಕಾಣಿಕೆಯ ಗೂಡಿನಲ್ಲಿ ಟರ್ಪಾಲು ಹಾಸಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ದಂಪತಿಯ ಎರಡನೇ ಪುತ್ರ ಗಣೇಶ್ ಪ್ರತಿಭಾವಂತನಾಗಿದ್ದು ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡಯಾಗಿದ್ದ. ಈತನಿಗೆ ಶುಭಕೋರಿ ಶಾಲಾ ಆಡಳಿತ ಮಂಡಳಿ ಬ್ಯಾನರ್ ಹಾಕಿತ್ತು. ಇದನ್ನು ಗಮನಿಸಿದ ದೇವಪ್ಪ ಕುಲಾಲ್ ಅವರ ಮನೆಗೆ ಅಭಿನಂದಿಸಲು ತೆರಳಿದಾಗ ಮನೆಯ ವಾಸ್ತವ ಸ್ಥಿತಿ ಅರಿವಿಗೆ ಬಂದು ಈ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಬೇಕು ಎನ್ನುವ ಸಂಕಲ್ಪ ತೊಟ್ಟರು. ಅಂತೆಯೇ ಹಂತಹಂತವಾಗಿ ನಿರ್ಮಾಣಗೊಂಡು ಒಂದು ವರ್ಷ ಏಳು ತಿಂಗಳಿನಲ್ಲಿ ಸುಸಜ್ಜಿತ ಮನೆಯ ಕನಸು ನನಸಾಗಿದೆ. ಸುಮಾರು ೩.೮ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣಗೊಂಡಿದ್ದು ದೊಡ್ಡ ಮೊತ್ತವನ್ನು ದೇವಪ್ಪ ಕುಲಾಲ್ ಭರಿಸಿದ್ದಾರೆ. ಉಳಿದಂತೆ ಮಾಜಿ ಸಚಿವ ಬಿ. ರಮಾನಾಥ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಲಯನ್ಸ್ ಕ್ಲಬ್ ಬಂಟ್ವಾಳ, ಹೊಟೇಲ್ ಮಾಲಕ ಮೋಹನ್ ಅಣ್ಣಳಿಕೆ, ಸಿರಿಲ್ ಕಾರ್ಲೋ, ಡಾಕಯ್ಯ ಪೂಜಾರಿ, ಗಿರಿಯಪ್ಪ ಪೂಜಾರಿ ನೂಜಂತ್ತೋಡಿ, ನವೀನ್ ಸಪಲ್ಯ ಕುಂಜರಬೆಟ್ಟು, ಹರೀಶ್ ಕುದನೆ, ನವಿನ್ ಗಾಣಿಗ ನರಿಕೊಂಬು, ಸಂತೋಷ್ ಅಮೈ, ಸುಮಿತ್ ಕುಲಾಲ್ ಸೊರ್ನಾಡ್ ಆರ್ಥಿಕ ಸಹಕಾರ ನೀಡಿದರೆ ವಿದ್ಯುತ್ ವ್ಯವಸ್ಥೆಯನ್ನು ಜೆಇ ತಿಲಕ್, ಹೆರಾಲ್ಡ್ ಬಂಟ್ವಾಳ ಒದಗಿಸಿದ್ದಾರೆ. ರಾಧಕೃಷ್ಣ ಭಟ್ ಪೆದಮಲೆ ಧಾರ್ಮಿಕ ವಿಧಿವಿಧಾನವನ್ನು ಉಚಿತವಾಗಿ ನೆರವೇರಿಸಿಕೊಟ್ಟರು.
Advertisement







