
ಬಂಟ್ವಾಳ: ನಾಗರಿಕ ಸಮಾಜದಲ್ಲಿ ಅನೇಕ ಮಂದಿ ವಿವಿಧ ರೀತಿಯ ಸಮಾಜ ಸೇವೆಗಳನ್ನು ಮಾಡುತ್ತಿರುತ್ತಾರೆ. ಕೆಲವರ ಸಮಾಜ ಸೇವೆಯನ್ನು ಸಮಾಜ ಗುರುತಿಸಿಕೊಂಡಿದ್ದರೆ, ಅನೇಕ ಮಂದಿಯ ಸಮಾಜ ಸೇವೆಗಳು ಎಲೆಮರೆಯ ಕಾಯಿಯಂತೆ ಬೆಳಕಿಗೆ ಬಾರದೆ ಉಳಿದುಬಿಡುತ್ತದೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಈ ಮುಸ್ಲಿಂ ದಂಪತಿ ಅಪೂರ್ವವಾದ ಹಾಗೂ ಮಾದರಿ ಸೇವಾ ಕಾರ್ಯಗಳನ್ನು ಮಾಡಿದರೂ ಎಲೆಮರೆಯ ಕಾಯಿಯಾಗಿ ಉಳಿದು ಬಿಟ್ಟಿದ್ದಾರೆ!
ಕರ್ನಾಟಕ ಹಾಗೂ ಕೇರಳ ರಾಜ್ಯದ ಗಡಿಭಾಗದಲ್ಲಿದೆ ಮಾಣಿಲ ಎನ್ನುವ ಸಣ್ಣ ಗ್ರಾಮ. ಈಗಷ್ಟೇ ಅಭಿವೃದ್ದಿಯ ಹೆಜ್ಜೆಗಳನ್ನು ಕಾಣುತ್ತಿರುವ ಈ ಗ್ರಾಮದ ಕಾಮಜಲು ಎನ್ನುವ ಸಣ್ಣ ಊರಿನಲ್ಲಿರುವ ಪಿ. ಮಹಮ್ಮದ್ ಕುಂಞ ಹಾಗೂ ಕುಂಞಪಾತು ದಂಪತಿಗಳ ಸಾಧನೆ ಅಪೂರ್ವವಾದುದು. ಪತಿ ಮಹಮ್ಮದ್ ಕುಂಞ ಊರಿನ ಬಡ ಮಕ್ಕಳಿಗಾಗಿ ತನ್ನ ಅಂಗಡಿಯಲ್ಲೇ ಶಾಲೆ ತೆರೆದ ಅಕ್ಷರ ಸಂತನಾದರೆ, ಪತ್ನಿ ಈ ಊರಿಗೆ ಸರಕಾರಿ ಬಸ್ಸನ್ನು ತರಿಸಿದ ಸಾಹಸಿ.


ಶಾಲೆ ತೆರೆದ ಅಕ್ಷರ ಸಂತ:
ಮಹಮ್ಮದ್ ಕುಂಞ ಅವರ ತಂದೆಗೆ ೧೪ ಮಂದಿ ಮಕ್ಕಳು. ತಾನೇ ಹಿರಿಯವನಾದ ಕಾರಣ ಹೆಚ್ಚು ಶಾಲೆ ಕಲಿಯಲು ಸಾಧ್ಯವಾಗಿರಲಿಲ್ಲ. ಆದರೆ ಶಿಕ್ಷಕನಾಗಿದ್ದ ತನ್ನ ಚಿಕ್ಕಪ್ಪನಿಂದ ಓದು, ಬರಹಗಳನ್ನು ತಿಳಿದು ಕೊಂಡಿದ್ದರು. ಕಾಮಜಲುವಿನಲ್ಲಿ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಅವರು ಆಸುಪಾಸಿನಲ್ಲಿದ್ದ ದಲಿತ ಹಾಗೂ ಹಿಂದುಳಿತ ಸಮಾಜಕ್ಕೆ ಸೇರಿದ್ದ ಕುಟುಂಬಗಳ ಮಕ್ಕಳು ಶಾಲೆ ಕಲಿಯಬೇಕಾದರೆ ಪಕ್ಕದೂರಿಗೆ ಹೋಗಬೇಕಿತು. ಬಡಕುಟುಂಬದ ಅನೇಕ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿಯೇ ಇದ್ದುದನ್ನು ಕಂಡ ಮಹಮ್ಮದ್ ಕುಂಞಯವರು ತಾನು ವಿದ್ಯೆ ಕಲಿಯದಿದ್ದರೂ ಈ ಮಕ್ಕಳು ಅಕ್ಷರ ಕಲಿಯಬೇಕೆಂದು ತನ್ನ ಅಂಗಡಿ ಕೋಣೆಯಲ್ಲಿಯೇ ಆ ಮಕ್ಕಳಿಗೆ ಅ..ಆ.ಇ..ಈ.. ಅಕ್ಷರಭ್ಯಾಸ ಮಾಡಲಾರಂಭಿಸಿದರು. ಕ್ರಮೇಣ ಈ ಊರಿಗೆ ಶಾಲೆಯನ್ನು ಮಂಜೂರುಗೊಳಿಸಬೇಕೆಂದು ಪಣತೊಟ್ಟು ತನ್ನ ಊರಿನ ಪ್ರಮುಖರೊಂದಿಗೆ ಹೋರಾಟ ನಡೆಸಿ ಶಾಲೆಯನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾದರು. ಆರಂಭದ ಹಂತದಲ್ಲಿ ತರಗತಿ ನಡೆಸಲು ಕೊಠಡಿ ಇಲ್ಲದೆ ಇದ್ದಾಗ ತನ್ನ ಅಂಗಡಿ ಕೋಣೆಯ ಪಕ್ಕದ ಶೆಡ್ ನೀಡಿ ತರಗತಿ ಆರಂಭಿಸಿದ್ದರು. ಏಕೋಪಾಧ್ಯಾಯ ಶಿಕ್ಷಕರೊಬ್ಬರು ನೇಮಕಗೊಂಡಿದ್ದರೂ ಅವರಿಗೆ ಊಟೋಪಾಚಾರದ ವ್ಯವಸ್ಥೆಯನ್ನು ಮಹಮ್ಮದ್ ಕುಂಞ ಒದಗಿಸಿದ್ದರು. ಹಲವು ವರ್ಷಗಳ ವರೆಗೆ ಅಂಗಡಿ ಕೋಣೆಯಲ್ಲಿಯೇ ಶಾಲೆ ನಡೆಯುತ್ತಿದ್ದು ಬಳಿಕ ತನ್ನ ಹಾಗೂ ಊರಿನವರ ಪರಿಶ್ರಮದಿಂದ ಸರಕಾರದ ವತಿಯಿಂದ ಎರಡು ಕೊಠಡಿಯಿದ್ದ ಶಾಲೆ ಕಟ್ಟಡ ನಿರ್ಮಾಣಗೊಂಡಿತು. ಬಳಿಕ ಊರಿನವರ ಸಹಕಾರದೊಂದಿಗೆ ಹಂತ ಹಂತವಾಗಿ ಅಭಿವೃದ್ದಿ ಕಂಡಿತು. ಆಗಲೂ ದೂರದ ಊರಿನಿಂದ ಬರುತ್ತಿದ್ದ ಶಿಕ್ಷಕರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಹಮ್ಮದ್ ಕುಂಞಯವರೇ ಮಾಡಿದ್ದರು. ಕೆಲವು ಸಮಯದವರೆಗೆ ಅವರ ಪತ್ನಿ ಕುಂಞಪಾತು ಶಿಕ್ಷಕಿಯಾಗಿ ಉಚಿತ ಸೇವೆ ನೀಡಿದ್ದಾರೆ. ಅಂದು ಅಂಗಡಿ ಕೋಣೆಯಲ್ಲಿ ಆರಂಭಗೊಂಡಿದ್ದ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕೆಲವು ದಿನಗಳ ಹಿಂದೆಯಷ್ಟೇ ರಜತ ಮಹೋತ್ಸವ ಸಂಭ್ರಮದಿಂದ ಆಚರಿಸಿಕೊಂಡಿತು. ಈಗ ಈ ಸರಕಾರಿ ಶಾಲೆಯಲ್ಲಿ ೩೬ ಮಕ್ಕಳಿದ್ದಾರೆ.

ಊರಿಗೆ ಬಸ್ಸು ತರಿಸಿದ ಸಾಹಸಿ ಮಹಿಳೆ:
ಮಹಮ್ಮದ್ ಕುಂಞ ಅವರ ಪತ್ನಿ ಕುಂಞಪಾತು ಅವರು ಕೂಡ ಪತಿಯಂತೆ ಸೇವಾ ಕಾರ್ಯದಲ್ಲಿ ಆಸಕ್ತಿ ಹೊಂದಿದವರು. ಕುಗ್ರಾಮವಾಗಿದ್ದ ತಮ್ಮೂರಿಗೆ ಸರಕಾರಿ ಬಸ್ಸನ್ನು ತರಿಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ.
ಕುಂಞಪಾತು ವಿದ್ಯಾವಂತೆ. ಮುಸ್ಲಿಂ ಮಹಿಳೆಯಾದರೂ ತನ್ನ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಸಮಾಜ ಸೇವಾ ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದವರು. ಈ ಹಿಂದೆ ಮಾಣಿಲ, ಪಕಳಕುಂಜಕ್ಕೆ ಬರುತ್ತಿದ್ದ ಸರಕಾರಿ ಬಸ್ಸು ಕಾರಣಾಂತರಗಳಿಂದ ಸಂಚಾರ ನಿಲುಗಡೆಗೊಳಿಸಿದ ಬಳಿಕ ಈ ಭಾಗದಲ್ಲಿ ಎರಡು ಖಾಸಗಿ ಬಸ್ಸುಗಳು ಸೇವೆ ನೀಡುತ್ತಿದ್ದವು. ಆದರೆ ನಿಯಮಿತವಾಗಿ ಸಂಚಾರ ಇಲ್ಲದೇ ಇದ್ದುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿತ್ತು. ಅದೆಷ್ಟೋ ಬಾರಿ ಮಕ್ಕಳು ರಸ್ತೆಯವರೆಗೆ ಹೋಗಿ ಬಸ್ಸು ಇಲ್ಲ ಎಂದು ವಾಪಸ್ಸು ಬಂದಿದ್ದರು. ಇದರಿಂದ ನೊಂದುಕೊಂಡಿದ್ದ ಕುಂಞಪಾತು ಗ್ರಾಮಸ್ಥರೆಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಕಚೇರಿಗೆ ಅಲೆದು ಮೂರು ಸರಕಾರಿ ಬಸ್ಸುಗಳನ್ನು ತನ್ನೂರಿಗೆ ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಅನೇಕರು ಇವರ ಪ್ರಯತ್ನಕ್ಕೆ ಕೈ ಜೋಡಿಸಿ ಸಹಕರಿಸಿದರೆ ಇನ್ನೂ ಕೆಲವರು ನಿಂದಿಸಿದ್ದಾರೆ. ಆದರೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ತನ್ನ ಗುರಿ ತಲುಪುವಲ್ಲಿ ಯಶಸ್ವಿಯಾದರು. ಇಂದಿಗೂ ಮಾಣಿಲ ಹಾಗೂ ಸುತ್ತಲಿನ ಗ್ರಾಮದಲ್ಲಿ ಇವರ ಹೆಸರು ಏನೆಂದು ಬಹುತೇಕರಿಗೆ ಗೊತ್ತಿಲ್ಲ, ಆದರೆ ಊರಿಗೆ ಬಸ್ಸು ತರಿಸಿದ ಕಾರಣಕ್ಕೆ ಬಸ್ಸಿನ ಬ್ಯಾರ್ದಿ ಎಂದೇ ಚಿರಪರಿಚಿತರಾಗಿದ್ದಾರೆ. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಸಹಿತ ಅನೇಕ ಮಂದಿ ಹೋರಾಟದ ಸಂದರ್ಭದಲ್ಲಿ ಜತೆಗಿದ್ದರು ಎನ್ನುವುದನ್ನು ಕುಂಞಪಾತು ನೆನೆಪಿಸಿಕೊಳ್ಳುತ್ತಾರೆ. ಕುಂಞಪಾತು ಅವರ ಹೋರಾಟದ ಫಲವಾಗಿ ಈಗಲೂ ೩ ಸರಕಾರಿ ಬಸ್ಸುಗಳು ಮಾಣಿಲ, ಪಕಳಕುಂಜಕ್ಕೆ ಸಂಚಾರ ಸೇವೆ ನೀಡುತ್ತಿದೆ.
Advertisement







