
ಬಂಟ್ವಾಳ: ಸಿದ್ಧ ವಿಧಾನಶಾಸ್ತ್ರ (ಮೆಥಡಲೋಜಿ) ಇಲ್ಲದೆ ರಾಜಮಣಿ ರಾಮಕುಂಜ ಅವರು ಸಂಶೋಧನಾ ಕೃತಿ ಬರೆದಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಪುಸ್ತಕದ ಬಾಹ್ಯ ವ್ಯಕಿತ್ವದಷ್ಟೇ ಸುಂದರವಾಗಿ ಅಂತರಂಗವೂ ಮೂಡಿಬಂದಿದೆ. ಅವರಲ್ಲಿ ಇತಿಹಾಸ ಪ್ರಜ್ಞೆ ಇದೆ, ಅವರೊಬ್ಬ ಇತಿಹಾಸಕಾರ ಎಂದು ಎಂದು ಮೂಡಬಿದಿರೆ ಧವಳ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.
ಸರಿದಂತರ ಪ್ರಕಾಶನ ಮೊಡಂಕಾಪು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ ಸಂಶೋಧನಾ ಗ್ರಂಥ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಇಂದು ಪುಸ್ತಕ ಅನಾವರಣ ಗೊಂಡಿದೆ, ಅದರ ಹಿಂದೆ ಶ್ರಮಿಸಿದವರಿಗೆ ಬಿಡುಗಡೆಯಾಗಿದೆ. ಕುಂದುಕೊರತೆಗಳು ಇಲ್ಲದ ರೀತಿಯಲ್ಲಿ ಅದ್ಭುತವಾದ ಪುಸ್ತಕ ರಚನೆಯಾಗಿದ್ದು ಸ್ವಂತ ಪ್ರಕಾಶನದ ಮೂಲಕ ಪುಸ್ತಕ ಹೊರತರುವ ಸಾಹಸವನ್ನು ರಾಜಮಣಿ ಮಾಡಿದ್ದಾರೆ. 14 ವರ್ಷದ ಶ್ರಮದ ಫಲವಾಗಿ ಈ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಬಂಟ್ವಾಳದ ಸಾಂಸ್ಕ್ರತಿಕ ಪರಿಸರ ಕೃತಿ ರಚನೆಯಾಗಿದ್ದು ಈ ಭಾಗದ ಸಂಶೋಧನೆಯನ್ನು ಮಾಡುವ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಇದು ಆಕರ ಗ್ರಂಥವಾಗಲಿದೆ ಎಂದು ತಿಳಿಸಿದರು.


ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಪಕ ಡಾ.ತಾಳ್ತಜೆ ವಸಂತ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ವತ್ತು ಪರಿಶ್ರಮ, ಸತತ ಅಭ್ಯಾಸದಿಂದ ಬರುವಂತದ್ದು, ರಾಜಮಣಿ ರಾಮಕುಂಜ ಅವರು ಈ ಕಾರ್ಯದಲ್ಲಿ ಸಾಫಲ್ಯತೆಯನ್ನು ಕಂಡಿದ್ದಾರೆ ಎಂದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು.
ಕೃತಿ ರಚನೆಕಾರ ರಾಜಮಣಿ ರಾಮಕುಂಜ ಸ್ವಾಗತಿಸಿದರು. ಮಧುರ ವಂದಿಸಿದರು
ಕಸಾಪ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
