ಬಂಟ್ವಾಳ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಶನಿವಾರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಪೂಜೆ ಸಲ್ಲಿಸಿ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂರನೇ ಬಾರಿ ದ.ಕ. ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿಗೆ ಭೇಟಿ ನೀಡುವುದೇ ಆನಂದ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಕಳೆದ ಹತ್ತು ವರ್ಷದಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೇ ಕೆಲಸ ನಿರ್ವಹಿಸಿ ನುಡಿದಂತೆ ನಡೆದಿದ್ದಾರೆ. ಅವರು ಮೂರನೇ ಅವಧಿಗೆ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಹತ್ಯೆಯ ಸಂಖ್ಯೆ ಹೆಚ್ಚಾಗಿದ್ದು ಹತ್ಯೆ ಮಾಡುವವರನ್ನು ಕಾಂಗ್ರೆಸ್ ಸರಕಾರ ರಕ್ಷಣೆ ಮಾಡುತ್ತಿದೆ. ಇದು ರಾಜ್ಯದ ದೌರ್ಭಾಗ್ಯ. ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಕ್, ಹರೀಶ್ ಪೂಂಜ, ವೈ.ಭರತ್ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ಜಗದೀಶ ಶೇಣವ, ಪೂಜಾ ಪೈ, ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್, ಯತೀಶ್ ಆಳ್ವ, ದೇವಪ್ಪ ಪೂಜಾರಿ, ಜೆಡಿಎಸ್ನ ಹರ್ಷಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಸ್ವಾಗತಿಸಿದರು, ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.
……