ಬಂಟ್ವಾಳ: ಆಟಿ ಆಚರಣೆಯಲ್ಲ, ಅದು ಪ್ರಕೃತಿ ಸಹಜ ಬದುಕು. ಅಂದಿನ ಬಡತನದ ಬದುಕನ್ನು ಇಂದು ಕೆಲವೆಡೆ ಆಚರಣೆಯ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಅಂದಿನ ಆಟಿಯ ಬಡತನದ ಬದುಕಿನ ಹಿಂದಿರುವ ವಾಸ್ತವಾಂಶವನ್ನು ಇಂದಿನ ಜನಾಂಗಕ್ಕೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಕೃತಿಯೆಡೆಗೆ ಮುಖ ಮಾಡಿ ಬದುಕಿದರೆ ಮಾತ್ರ ಮಾನವನ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರ ಇದೆ ಎಂಬ ಸಂದೇಶವನ್ನು ಅಂದಿನ ಆಟಿಯ ಬದುಕು ನಮಗೆ ನೀಡುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಗೋಪಾಲ ಅಂಚನ್ ಹೇಳಿದ್ದಾರೆ.
ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ “ಆಟಿದ ನೆನಪು” ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಂದಿನ ಆಟಿ ತಿಂಗಳಲ್ಲಿ ಪ್ರಕೃತಿ ಸಹಜವಾಗಿ ಕಾಡಿದ ಭಯ, ಹಸಿವು ಹಾಗೂ ರೋಗಗಳಿಗೆ ಮಾನವ ಪ್ರಕೃತಿಯಲ್ಲಿಯೇ ಕಂಡು ಹಿಡಿದ ಪರಿಹಾರಗಳೇ ಇಂದು ಆಚರಣೆಯ ಭಾಗಗಳಾಗಿ ರೂಪಾಂತರಗೊಂಡಿದೆ. ಅಂದು ಪರಿಸರದಲ್ಲಿ ಸಿಕ್ಕಿದ ಕಾಡ ಉತ್ಪನ್ನಗಳು ಹಸಿವು ಮತ್ತು ರೋಗಗಳನ್ನು ನಿವಾರಿಸಿದರೆ ಆಟಿ ಕಳೆಂಜ ಭಯ ನಿವಾರಿಸುವ ಮಾಂತ್ರಿಕ ಶಕ್ತಿಯಾಗಿ ಜನಪದರ ಬದುಕಿನಲ್ಲಿ ಪ್ರಭಾವ ಬೀರಿದ್ದಾನೆ ಎಂದು ಗೋಪಾಲ ಅಂಚನ್ ವಿಶ್ಲೇಷಿಸಿದರು.
ಹಿರಿಯ ಉಪನ್ಯಾಸಕ ದಾಮೋದರ ಅಧ್ಯಕ್ಷತೆ ವಹಿಸಿದ್ದರು.
ಹಿಂದಿನ ಕಾಲದ ಆಟಿ ತಿಂಗಳಲ್ಲಿ ಜನಪದರು ಕಟ್ಟಿಕೊಂಡಿದ್ದ ಬದುಕಿನಲ್ಲಿದ್ದ ಉತ್ತಮ ಅಂಶಗಳನ್ನು ನಾವು ಅಳವಡಿಸಿಕೊಂಡಾಗ ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಇದೆ. ಹಿಂದಿನ ನೈಸರ್ಗಿಕವಾದ ಬದುಕಿನ ಬಗ್ಗೆ ಮಕ್ಕಳಿಗೆ ತಿಳಿಯಪಡಿಸುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಕೆ.ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ದಿವ್ಯಾ, ಭಾರತಿ, ರಾಧಾ, ಹರ್ಷಿತಾ, ಸವಿತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ದಿಶಾ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು. ಶೈಲೆಟ್ ಪ್ರೀಮಾ ಸುವಾರಿಸ್ ಕಾರ್ಯಕ್ರಮ ನಿರೂಪಿಸಿದರು.