ಬಂಟ್ವಾಳ: ರೋಟರಿ ಜಿಲ್ಲೆ ೩೧೮೧ರ ಪ್ರಸ್ತತ ಸಾಲಿನ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರೊಂದಿಗೆ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಈ ವರ್ಷದ ಅಮೋಘ ಯಶಸ್ಸಿಗೆ ಕಾರಣಿಕರ್ತರಾದ ರೋಟರಿ ಜಿಲ್ಲೆಯ ಪದಾಧಿಕಾರಿಗಳಿಗೆ, ರೋಟರಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಧನ್ಯೋಸ್ಮಿ ಶನಿವಾರ ಸಂಜೆ ಬೆಂಜನಪದವಿನ ಶುಭ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಸಹಾಯಕ ತರಬೇತುದಾರ ಎಂ. ಎಂ. ಸುರೇಶ್ ಚೆಂಗಪ್ಪ ಹಾಗೂ ಪೂರ್ವ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಹಾಯಕ ತರಬೇತುದಾರ ಎಂ. ಎಂ. ಸುರೇಶ್ ಚೆಂಗಪ್ಪ ಮಾತನಾಡಿ ಪ್ರಕಾಶ್ ಕಾರಂತ್ ಅವರ ಮುಖದಲ್ಲಿ ಒಂದು ನಗುವಿದೆ, ಆ ನಗುವಿನ ಹಿಂದೆ ಆಕಾಂಕ್ಷೆ ಇದೆ. ತಾನು ಮಾಡುವ ಪ್ರತಿಯೊಂದು ಕೆಲಸ ವಿಭಿನ್ನವಾಗಿರಬೇಕು ಎನ್ನುವ ಕಲ್ಪನೆಯಿಟ್ಟುಕೊಂಡು ಅದಕ್ಕಾಗಿ ಅವಿರತ ಶ್ರಮ ಪಟ್ಟು ಯಶಸ್ವಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ 3182 ಪೂರ್ವ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿ ನಮ್ಮ ಕಲ್ಪನೆಗೂ ಮೀರಿದ ನಾಯಕತ್ವ ಪ್ರಕಾಶ್ ಕಾರಂತ್ ಅವರನ್ನು ಈ ಹಂತಕ್ಕೆ ಬೆಳೆಯುವಂತೆ ಮಾಡಿದೆ. ಅವರಲ್ಲಿರುವ ಕಳಕಳಿ, ತನ್ನ ಯೋಜನೆ ಕಾರ್ಯಕ್ರಮಗಳನ್ನು ಸೊಗಸಾಗಿ ಮಾಡಬೇಕೆನ್ನುವ ಅವರ ತುಡಿತ ಅವರನ್ನು ಇಲ್ಲಿವರೆಗೆ ಕರೆ ತಂದಿದೆ ಎಂದರು.
ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ನನ್ನ ಯಶಸ್ಸಿನ ಚಿತ್ರಣದ ನಿರ್ಮಾಪಕರು ಎಲ್ಲಾ ರೋಟರಿ ಸದಸ್ಯರು. ನನಗೆ ಶಕ್ತಿ ನೀಡಿ ನನ್ನನ್ನು ಶಕ್ತನನ್ನಾಗಿ ಮಾಡಿದೀರಿ. ನಾಯಕತ್ವ ಗುಣ ನೀಡಿದ್ದೀರಿ. ಈ ವರ್ಷದ ಅದ್ಭುತ ಚಿತ್ರದ ಸಾಕ್ಷತ್ಕರ ಧನ್ಯತೆ ನೀಡಿದೆ ಎಂದರು.
ಜಿಲ್ಲಾ ಪ್ರಥಮ ಮಹಿಳೆ ವಾಣಿ ಕಾರಂತ್, ಜಿಲ್ಲಾ ಕೌನ್ಸಿಲರ್ ರಂಗನಾಥ ಭಟ್, ಪಿಡಿಜಿಗಳಾದ ಕೃಷ್ಣ ಶೆಟ್ಟಿ, ಶೇಖರ ಶೆಟ್ಟಿ, ನಿಯೋಜಿತ ಗವರ್ನರ್ ವಿಕ್ರಂದತ್ತ, ಪ್ರಮುಖರಾಧ ಮಂಜುನಾಥ ಆಚಾರ್ಯ, ಪುಷ್ಪರಾಜ ಹೆಗ್ಡೆ, ಅಶ್ವಿನ್ ಕುಮಾರ್ ರೈ, ಅವಿಲ್ ಮಿನೇಜಸ್, ಡಾ. ಆತ್ಮರಂಜನ್ ರೈ ಪ್ರಕಾಶ್ ಬಾಳಿಗ, ಎಲಿಯಸ್ ಸ್ಯಾಂಕ್ತಿಸ್ತ್, ಮುರಳೀಧರ ಪ್ರಭು, ಭಾನುಶಂಕರ್ ಬನ್ನಿಂತ್ತಾಯ ಮೊದಲಾದವರು ಉಪಸ್ಥಿತರಿದ್ದರು. ಈ ಸಂಧರ್ಭ ರೋಟರಿ 3181ನ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಂಜೀವ ಪೂಜಾರಿ ಸ್ವಾಗತಿಸಿದರು, ಜಿಲ್ಲಾ ಅಡಳಿತಾತ್ಮಕ ಕಾರ್ಯದರ್ಶಿ ನಾರಾಯಣ ಹೆಗ್ಡೆ ಪ್ರಾಸ್ತವಿಕವಾಗಿ ಮಾತನಾಡಿದರು. ರಾಮಣ್ಣ ರೈ ವಂದಿಸಿದರು. ರಾಜೇಂದ್ರ ಕಲ್ಬಾವಿ ಹಾಗೂ ವಿಶ್ವಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.