ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣಾ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋಳಾರ ಉಮಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ, ಉದ್ಯಮಿ ಸೀತಾರಾಮ ಎ. ಆಹಾರ ಧಾನ್ಯ ವಿತರಿಸಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕೃಷ್ಣಕುಮಾರ್ ಪೂಂಜ ಅವರು ಮಾಡುವ ಸೇವೆ ಅಪೂರ್ವವಾದುದು. ಶಿಕ್ಷಣ, ಆರೋಗ್ಯ ಮತ್ತಿತರ ಸೌಲಭ್ಯಗಳು ಅರ್ಹ ಜನರಿಗೆ ತಲುಪಲು ಅವರು ಅಹರ್ನಿಶಿಯಾಗಿ ದುಡಿಯುತ್ತಿದ್ದಾರೆ. ಜಾತಿ ಮತದ ಭೇದವಿಲ್ಲದೆ ಬಡವರಿಗಾಗಿ ತುಡಿಯುವ ವ್ಯಕ್ತಿತ್ವ ಕೃಷ್ಣಕುಮಾರ್ ಪೂಂಜರದ್ದು ಎಂದು ತಿಳಿಸಿದರು.
ಸೇವಾಂಜಲಿ ಸಂಸ್ಥೆ ಮಾಡುವ ಸೇವಾ ಕಾರ್ಯಗಳಿಗೆ ನಾವು ಸಹಕಾರ ನೀಡಿದಾಗ ಇನ್ನಷ್ಟು ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಸಾಧ್ಯವಿದೆ, ಪೌಷ್ಟಿಕಾಹಾರ ಸೇವೆನೆಯ ಮೂಲಕ ಕ್ಷಯ ರೋಗ ನಿರ್ಮೂಲನೆ ಸಾಧ್ಯವಿದ್ದು ಕ್ಷಯ ರೋಗಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಬೇಗ ಗುಣಮುಖರಾಗಿ ಎಂದು ತಿಳಿಸಿದರು.
ಮನೋವೈದ್ಯ ಡಾ. ರವೀಶ್ ತುಂಗ ಮಾತನಾಡಿ ಕ್ಷಯ ರೋಗಿಗಳು ಔಷಧಿಯೊಂದಿಗೆ ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿ, ಸಮಾಜದಲ್ಲಿ ಉತ್ತಮ ಜೀವನ ನಡೆಸ ಬೇಕೆಂದು ತಿಳಿಸಿದರು. ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಪ್ರತಿಷ್ಠಾನ ಪ್ರತಿ ತಿಂಗಳು ಬದ್ದತೆಯಿಂದ ಆಹಾರ ಧಾನ್ಯವನ್ನು ನೀಡಿ ಕ್ಷಯ ರೋಗಿಗಳ ಕಾಳಜಿ ವಹಿಸುತ್ತಿರುವುದು ಅಭಿನಂದನೀಯ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಟ್ರಸ್ಟಿ ಭಾಸ್ಕರ ಚೌಟ ಕುಮ್ಡೇಲು, ಕೊಡ್ಮಾನ್ ದೇವದಾಸ್ ಶೆಟ್ಟಿ, ಸುರೇಶ್ ರೈ ಪೆಲಪಾಡಿ ಪ್ರಮುಖರಾದ ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ ತೇವು, ಕೃಷ್ಣ ತುಪ್ಪಕಲ್ಲು, ಸುಕುಮಾರ್, ಉಮೇಶ್ ಸೇಮಿತ ತುಪ್ಪೆಕಲ್ಲು, ಪ್ರಶಾಂತ್ ತುಂಬೆ, ವಿಕ್ರಮ್ ಬರ್ಕೆ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ, ಕಾರ್ಯಕ್ರಮ ಸಂಯೋಜಿಸಿದರು.