
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ನಿರ್ಮಾಣಗೊಂಡ ಎರಡು ಶಾಶ್ವತ ಯೋಜನೆಗಳು ಹಾಗೂ ಒಂದು ಬಸ್ಸು ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ನರಿಕೊಂಬು ಗ್ರಾಮದ ಪಂಚಾಯತಿ ಕಚೇರಿ ಬಳಿ ನಿರ್ಮಾಣಗೊಂಡ ಎಸ್ ಎಸ್ ಕಾರಂತ್ ರೋಟರಿ ಬಸ್ಸು ನಿಲ್ದಾಣ, ಪಾಣೆಮಂಗಳೂರಿನ ಶ್ರೀ ಶಾರಾದಾ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ವಿಜ್ಞಾನ ಪ್ರಯೋಗಾಲಯ ಹಾಗೂ ಪೆರ್ನೆ ಶ್ರೀ ರಾಮಚಂದ್ರ ವಿದ್ಯಾಲಯದಲ್ಲಿ ನಿರ್ಮಾಣಗೊಂಡ ಜ್ಞಾನ ಸೌರಭ ಗ್ರಂಥಾಲಯವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಉದ್ಘಾಟಿಸಿದರು.

ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಜೀವನ ಇನ್ನೊಬ್ಬರಿಗಾಗಿ ಮುಡಿಪಾಗಿಟ್ಟಾಗ ಅದು ಸಾರ್ಥಕವಾಗುತುದೆ. ಪ್ರಕೃತಿ ಇಂದು ಎಲ್ಲವನ್ನು ಬೇರೆಯವರಿಗಾಗಿ ನೀಡುತ್ತದೆ. ಅದಕ್ಕೆ ಅದು ನಮಗೆ ಪೂಜನೀಯವಾಗಿದೆ. ಸಂಪತ್ತು ನಮ್ಮಲ್ಲಿ ಇರುವುದು ಮುಖ್ಯವಲ್ಲ, ಸಂಪತ್ತಿನ ಅರಿವು ಮುಖ್ಯ. ಬದುಕಿಗಾಗಿ ಸಂಪತ್ತು ಇರಬೇಕೆ ಹೊರತು ಸಂಪತ್ತಿಗಾಗಿ ಬದುಕಿರಬಾರದು. ಸಮಾಜಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದವರ ನೆನೆಪು ಸದಾ ಸ್ಮರಣೀಯವಾಗಿರುತ್ತದೆ. ಸಮಾಜದಿಂದ ಪಡೆದುದನ್ನು ಹಿಂದಿರುಗಿಸುವ ಋಣ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.



ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮಾತನಾಡಿ ಪ್ರಕಾಶ್ ಕಾರಂತ್ ಅವರು ಜಿಲ್ಲಾ ಗವರ್ನರ್ ಆಗಿರುವುದು ಬಂಟ್ವಾಳದ ಕ್ಲಬ್ಗೆ ಹೆಮ್ಮೆಯ ವಿಚಾರ. ಅವರ ಅವಧಿಯಲ್ಲಿ ಅನೇಕ ಯೋಜನೆಗಳು ಇಲ್ಲಿಗೆ ಲಭ್ಯವಾಗಿದೆ ಎಂದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಮಾತನಾಡಿ ಬಂಟ್ವಾಳ ರೋಟರಿ ಕ್ಲಬ್ ತಾಲೂಕಿನ ವಿವಿಧ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದು ಅವುಗಳು ವಿದ್ಯಾರ್ಥಿಗಳಿಗೆ ಸದುಪಯೋಗ ಆದಾಗ ನಮ್ಮ ಶ್ರಮ ಸಾರ್ಥಕ ಎಂದು ತಿಳಿಸಿದರು. ಎಲ್ಲರ ಸಹಕಾರ ಇದ್ದಾಗ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿದ್ದು ಮುಂದಿನ ದಿನಗಳಲ್ಲಿ ರೋಟರಿ ಕ್ಲಬ್ ಬಂಟ್ವಾಳದ ಮೂಲಕ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.

ರೋಟರಿ ಜಿಲ್ಲಾ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳದ ಕಾರ್ಯದರ್ಶಿ ಭಾನುಶಂಕರ ಬನ್ನಿಂತ್ತಾಯ ಉಪಸ್ಥಿತರಿದ್ದರು. ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಡಾ. ವಿಶ್ವನಾಥ ನಾಯಕ್, ಸುಭೋದ್ ಜಿ ಪ್ರಭು, ನರೇಂದ್ರನಾಥ ಕುಡ್ವ ಉಪಸ್ಥಿತರಿದ್ದರು. ಶಾಲೆಯ ಟ್ರಸ್ಟಿ ಶ್ರೀನಿವಾಸ ಕುಡ್ವ ಸ್ವಾಗತಿಸಿದರು. ಶಿಕ್ಷಕಿ ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪೆರ್ನೆಯ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯಯದಲ್ಲಿ ನಡೆದ ಜ್ಞಾನ ಸೌರಭ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾ ಸಂಸ್ಥೆಯ ಸಂಚಾಲಕ, ನ್ಯಾಯವಾದಿ ಹರೀಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು ಪ್ರಾಂಶುಪಾಲ ಶೇಖರ ರೈ ಸ್ವಾಗತಿಸಿದರು. ಮುಖ್ಯ ಶಿಕ್ಷಕ ತಾರಾನಾಥ ಶೆಟ್ಟಿ ವಂದಿಸಿದರು, ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಇಂಟರಾಕ್ಟ್ ಕ್ಲಬ್ ಸಂಯೋಜಕಿ ಇಂದಿರಾ ಉಪಸ್ಥಿತರಿದ್ದರು.
—
