ಬಂಟ್ವಾಳ: ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರವಿವಾರ ನಡೆಯಿತು.
ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ಪಚ್ಚಾಜೆಗುತ್ತು ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ,ದೇವಸ್ಥಾನದ ಪುಣ್ಯಕಾರ್ಯದಲ್ಲಿ ಊರವರೆಲ್ಲರೂ ಭಾಗಿಗಳಾಗಿ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ದೇವಸ್ಥಾನ ಪುನರ್ನಿರ್ಮಾಣ ಕಾರ್ಯ ನಮಗೊದಗಿದ ಯೋಗ ಭಾಗ್ಯ. ದೇವರಿಗೆ ಸಮರ್ಪಣೆ ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುವುದು ಎಂದು ಹೇಳಿದರು. ಮೇ 20 ರಿಂದ ಮೇ 22 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ವಾಮದಪದವು, ಕಾರ್ಯಾಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ವೀರೇಂದ್ರ ಅಮೀನ್ ವಗ್ಗ, ಅನಂತ ಪೈ ವಾಮದಪದವು, ಉದ್ಯಮಿ ಹರೀಂದ್ರ ಪೈ,ಅರ್ಚಕ ಪ್ರಶಾಂತ್ ಐತಾಳ್, ಕೋಶಾಧಿಕಾರಿ ಜಯರಾಮ ಕುಲಾಲ್ ಪ್ರ.ಕಾರ್ಯದರ್ಶಿ ಅನಂತರಾಮ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸುರೇಶ್ ಉರುಡಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಗಟ್ಟಿ ವಂದಿಸಿದರು.