ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಬಿ.ಸಿ.ರೋಡು ವಲಯ ಇವರ ಸಹಯೋಗದೊಂದಿಗೆ ಪ್ರಗತಿ ಬಂಧು ಸಂಘಗಳಿಗೆ ಕೃಷಿ ಸಲಕರಣೆ ವಿತರಣೆ ಹಾಗೂ ಬಿ.ಸಿ.ರೋಡು ವಲಯ ಮಟ್ಟದ ಸಾಧನ ಸಮಾವೇಶ ಕಾರ್ಯಕ್ರಮ ಬಂಟ್ವಾಳದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜರುಗಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಮಾತೃಶ್ರೀಯವರ ದೂರದೃಷ್ಟಿ ಯೋಜನೆಯಿಂದ ಇಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜನರು ಸ್ವಾಭಿಮಾನದ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು. ಕರೋನಾ ಸಂದರ್ಭದಲ್ಲಿ ಜನರ ಮಾನ, ಪ್ರಾಣ ರಕ್ಷಣೆಯಾಗಿರುವುದು ಕೃಷಿಯಿಂದ. ದೇಶದ ಆರ್ಥಿಕತೆ ಉಳಿದಿರುವುದು ಕೃಷಿಯಿಂದ ಎಂದು ತಿಳಿಸಿದರು. ಯಾಂತ್ರಿಕ ಬದುಕಿಗೆ ಮಾರು ಹೋಗುವ ಈ ಕಾಲಘಟ್ಟದಲ್ಲಿ ಶ್ರಮಜೀವಿಗಳಾಗಿ ತಮ್ಮ ಕೃಷಿ ಕ್ಷೇತ್ರದಲ್ಲಿ ಯುವಕರಿಗೆ ಸಾಧನೆ ಮಾಡಲು ಹಲವಾರು ಅವಕಾಶ ಇದ್ದು ಈ ಬಗ್ಗೆ ಗಮನ ಹರಿಸುವ ಅಗತ್ಯತೆ ಇದೆ, ಬದುಕಿಗೆ ಅರ್ಥ ಕೊಡುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು. ನೀರನ್ನು ಸದ್ಬಳಕೆ ಮಾಡಿಕೊಂಡು, ನೀರಿಂಗಿಸುವ ಮೂಲಕ ಭೂಮಿಯ ತಾಪವನ್ನು ಕಡಿಮೆ ಮಾಡಬಹುದಾಗಿದೆ. ಮಣ್ಣಿ ಸತ್ವ ಕಾಪಾಡಿದರೆ ನಮಗೂ ಸತ್ವ, ತತ್ವ ಬರುತ್ತದೆ ಎಂದು ತಿಳಿಸಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ಕಾರ್ಯಕ್ರಮಗಳು ದೇವಾತಾನುಗ್ರಹದ ಕಾರ್ಯಕ್ರಮಗಳು ಎಂದು ಬಣ್ಣಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಖ್ಯ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಕೃಷಿ ಸಲಕರಣೆಯನ್ನು ವಿತರಿಸಿದರು. ಜಗತ್ತಿನಲ್ಲಿ ವಿಜ್ಞಾನ ಎಷ್ಟೇ ಮುಂದುವರಿದರೂ ಅಂತಿಮವಾಗಿ ಕೃಷಿಯೇ ಪ್ರಧಾನವಾಗಿ ನಿಲ್ಲುತ್ತದೆ. ಹಸಿವನ್ನು ನಿಯಂತ್ರಿಸುವ ಅವಿಷ್ಕಾರ ವಿಜ್ಞಾನ ಕ್ಷೇತ್ರದಲ್ಲಿ ಆಗದೇ ಇರುವುದರಿಂದ ಆಹಾರಕ್ಕಾಗಿ ಕೃಷಿಯನ್ನೇ ಅವಲಂಬಿಸಬೇಕಾಗಿದೆ ಎಂದರು. ಹೊಸ ಪ್ರಯೋಗಗಳ ಮೂಲಕ ಕೃಷಿಯಲ್ಲಿ ಹೆಚ್ಚಿನ ಫಸಲು ಪಡೆಯುವತ್ತ ಕೃಷಿಕರು ಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಹಾಲಿಂಗ ನಾಯ್ಕ ಅಮೈ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೆಂಕಟೇಶ್ ಬಂಟ್ವಾಳ, ಸೌರಭ ಪ್ರಶಸ್ತಿ ಪುರಸ್ಕೃತರಾದ ಜಯಾನಂದ ಪೆರಾಜೆ ಅವರನ್ನು ಸನ್ಮಾನಿಸಲಾಯಿತು. ವಾತ್ಸಲ್ಯ ಕಿಟ್, ವಿಕಲಚೇತನರಿಗೆ ವೀಲ್ ಚೆಯರ್ ವಿವಿಧ ಕೃಷಿ ಸಲಕರಣೆಯನ್ನು ವಿತರಿಸಲಾಯಿತು. ವಿವಿಧ ಅತ್ಯುತ್ತಮ ಸ್ವಸಹಾಯ ಸಂಘವನ್ನು ಗುರುತಿಸಿ ಅಭಿನಂದಿಸಲಾಯಿತು.
ಶ್ರೀ.ಧ.ಗ್ರಾ.ಯೋ.ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್, ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ,
ಶ್ರೀ.ಧ.ಗ್ರಾ.ಯೋ.ಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರೋನಾಲ್ಡ್ ಡಿ.ಸೋಜ, ಬಿ.ಸಿ.ರೋಡ್ ವಲಯಾಧ್ಯಕ್ಷರಾದ ಜಯಲಕ್ಷ್ಮಿ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ಚಂದಪ್ಪ ಮೂಲ್ಯ, ಸದಾನಂದ ಗೌಡ ನಾವೂರ, ಮಾಧವ ವಳವೂರು, ಶೇಖರ ಸಾಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ತಾ.ನ ಯೋಜನಾಧಿಕಾರಿ ಜಯಾನಂದ ಪಿ. ಪ್ರಸ್ತಾವಿಸಿ, ಸ್ವಾಗತಿಸಿದರು. ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಅಶ್ವಿನಿ ವಂದಿಸಿದರು.