ಬಂಟ್ವಾಳ: ಮುಂದಿನ ಮೇ ತಿಂಗಳಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರನ್ನು ನೇಮಿಸಬೇಕಾಗಿರುವುದರಿಂದ ದ.ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ|| ಮುರಲೀ ಮೋಹನ್ ಚೂಂತಾರು ಅವರು ಬಂಟ್ವಾಳ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿದರು. ನಿಷ್ಕ್ರಿಯ ಗೃಹರಕ್ಷಕರನ್ನು ತೆಗೆದುಹಾಕಿ ಹೆಚ್ಚು ಕ್ರೀಯಾಶೀಲ ಗೃಹರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಘಟಕಾಧಿಕಾರಿ ಐತಪ್ಪ ಅವರಿಗೆ ಸೂಚನೆ ನೀಡಿದರು. ಎಲ್ಲಾ ಗೃಹರಕ್ಷಕರು ತಮ್ಮ ಸದಸ್ಯತ್ವ ನವೀಕರಣಗೊಳಿಸಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದರು. ಪದೇ ಪದೇ ಕಾರಣವಿಲ್ಲದೆ ವಾರದ ಕವಾಯತಿಗೆ ಗೈರುಹಾಜರಾಗುವ ಮತ್ತು ಬಂದೋಬಸ್ತ್ ಕರ್ತವ್ಯಗಳಿಗೆ ಬಾರದೇ ಇರುವ ಗೃಹರಕ್ಷಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಘಟಕಾಧಿಕಾರಿಗೆ ಸೂಚನೆ ನೀಡಿದರು. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ಎಲ್ಲಾ ಗೃಹರಕ್ಷಕರು ನೊಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಶಿವರಾಜ್, ರಾಜೇಶ್, ಜಯಂತ್ ಮುಂತಾದವರು ಉಪಸ್ಥಿತರಿದ್ದರು.