ಬಂಟ್ವಾಳ: ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲಾ ಯುವ ಜನ ಒಕ್ಕೂಟ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಬಂಟ್ವಾಳ ಹಾಗೂ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಯುವ ಸಪ್ತಾಹ ಮತ್ತು ವಿವೇಕ ರಥ, ಯುವಪಥ- ಯುವ ಜಾಗೃತಿ ಕಾರ್ಯಕ್ರಮ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆಯಿತು.
ಕಲ್ಲಡ್ಕ ಪೇಟೆಯಲ್ಲಿ ಸ್ವಾಮಿ ವಿವೇಕಾನಂದರ ಸ್ತಬ್ಧ ಚಿತ್ರದ ರಥವನ್ನು ಶಾಸಕ ರಾಜೇಶ್ ನಾಕ್ ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರು ಪುಷ್ಪಾರ್ಚನೆಯ ಮಾಡುವ ಮೂಲಕ ಸ್ವಾಗತಿಸಿದರು.
ಬಳಿಕ ಕಲ್ಲಡ್ಕ ಶಾಲಾ ಮಕ್ಕಳ ಮೆರವಣಿಗೆಯ ಮೂಲಕ ರಥಯಾತ್ರೆ ಕಾಲೇಜಿಗೆ ತೆರಳಿತು.
ರಥಯಾತ್ರೆಯ ಬಳಿಕ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಲಡ್ಕ ಡಾ | ಪ್ರಭಾಕರ್ ಭಟ್, ಸ್ವಾಮಿ ವಿವೇಕಾನಂದ ಸರ್ವ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಇವರು ಓರ್ವರಾಗಿದ್ದು, ಇದೇ ರೀತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅನೇಕ ಮಹಾನ್ ಚೇತನಗಳ ಸಾಹಸದ ಕಥೆಯನ್ನು ಯುವಪೀಳಿಗೆಗೆ ತಿಳಿಸುವ ಕೆಲಸ ಬಹುಮುಖ್ಯವಾಗಿ ಆಗಬೇಕಾಗಿದೆ. ಆ ಮೂಲಕ ದೇಶದ ಸಂಸ್ಕೃತಿಯನ್ನು, ಪರಂಪರೆಯನ್ನು ಮತ್ತೆ ಮತ್ತೆ ಮೆಲುಕು ಹಾಕುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು. ಹಂತ ಹಂತವಾಗಿ ದೇಶದ ಮಹಾನ್ ನಾಯಕರುಗಳ ಪರಿಚಯ ಮಾಡುವುದರ ಜೊತೆ ಸಾಹಸದ ಕೆಲಸಗಳನ್ನು ಪರಿಚಯಿಸುವ ಕೆಲಸ ನಡೆಯಬೇಕಾಗಿದೆ. ಹಿಂದೂ ಎಂಬ ಪದ ಜಗತ್ತಿನಲ್ಲಿ ಶ್ರೇಷ್ಟವಾದ ಹಾಗೂ ಎಲ್ಲರಿಗೂ ಒಳಿತು ಮಾಡುವ ಪದ,ಅದಕ್ಕೆ ಸ್ಪೂರ್ತಿ ಸ್ವಾಮಿ ವಿವೇಕಾನಂದರು, ಎಂದು ಅವರು ಹೇಳಿದರು. ನಿರಾಶೆ, ಸೋಲಿನ, ಜಡತ್ವದ ಮನೋಭಾವವನ್ನು, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎಂಬುದನ್ನು ಸ್ವಾಮಿ ವಿವೇಕಾನಂದ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ.
ಜಗತ್ತಿಗೆ ಬದಲಾವಣೆ, ಶಾಂತಿ, ಸುವ್ಯವಸ್ಥೆ ,ಸಾಮಾಜಿಕ ಪರಿವರ್ತನೆಯ ಸ್ವಾಮಿ ವಿವೇಕಾನಂದರ ಕನಸು ಇಂದು ಪ್ರಧಾನಿ ನರೇಂದ್ರ ಮೋಧಿಯವರ ಮೂಲಕ ನನಸಾಗುತ್ತಿದೆ. ಭಾರತ ಎತ್ತರಕ್ಕೆ ಬೆಳೆಯುತ್ತಿದೆ ಎಂಬ ಸಂತೋಷ ವ್ಯಕ್ತಪಡಿಸಿದರು. ರಾಮರಾಜ್ಯದ ಕನಸು ನಿಜವಾಗುತ್ತಿದೆ, ಜನ ಸುಖ ನೆಮ್ಮದಿಯಿಂದ ಬದುಕುವ ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದರು. ಸರಕಾರ ಹಾಗೂ ಸರಕಾರೇತರ ಯುವವೇದಿಕೆಗಳು, ಸ್ವಾಮಿ ವಿವೇಕಾನಂದರಂತಹ ಅನೇಕ ಶ್ರೇಷ್ಠ ಮಟ್ಟದ ವ್ಯಕ್ತಿಗಳ ಸಂದೇಶಗಳನ್ನು ಸಾರುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯೆರ್ಕಟ್ಟೆ, ಇಲಾಖೆಯ ನಿರ್ದೇಶಕ ರಾಕೇಶ್ ರೈ ಕಡೆಂಜ, ಯುವ ಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್, ಜಿಲ್ಲಾ ನೊಡೆಲ್ ಅಧಿಕಾರಿ ಮಾಮಚ್ಚನ್, ಶಿಕ್ಷಕ ನವೀನ್ ಉಪಸ್ಥಿತರಿದ್ದರು. ಬಂಟ್ವಾಳ ಯುವಜನ ಒಕ್ಕೂಟದ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ವಿದ್ಯಾರ್ಥಿನಿ ಹರ್ಷಿತಾ ಎನ್ . ವಂದಿಸಿದರು. ವಿದ್ಯಾರ್ಥಿ ಜಯ್ ದೀಪ್ ಕಾರ್ಯಕ್ರಮ ನಿರೂಪಿಸಿದರು.