
ಬಂಟ್ವಾಳ: ಪಣೋಲಿಬೈಲಿನ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಕಳೆದ 40 ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಕುಲಾಲ್ ಪಣೋಲಿಬೈಲು ಅವರ ಕಳುವಾಗಿದ್ದ ಬುಲೆಟ್ ಬೈಕ್ ಮರಳಿ ದೊರೆತ ಘಟನೆ ಅಚ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಮಹಿಳೆಯೊಬ್ಬರು ನೀಡಿದ ಸುಳಿವಿನಿಂದ ಬೈಕ್ ಪತ್ತೆಯಾಗಿದ್ದು, ಇದು ಪಣೋಲಿಬೈಲು ಕ್ಷೇತ್ರದ ಶ್ರೀ ಕಲ್ಲುರ್ಟಿ ಅಮ್ಮನವರ ಕಾರಣಿಕ ಎಂದೇ ರಮೇಶ್ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಅಕ್ಟೋಬರ್ 8ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ರಮೇಶ್ ಕುಲಾಲ್ ಅವರು ತಮ್ಮ ಬೈಕನ್ನು ಬಿ.ಸಿ.ರೋಡ್ ಪ್ರೈ ಓವರ್ ಕೆಳಭಾಗದಲ್ಲಿ ನಿಲ್ಲಿಸಿ, ಮಗನೊಂದಿಗೆ ಕಟೀಲು ಕ್ಷೇತ್ರಕ್ಕೆ ಬಸ್ಸಿನಲ್ಲಿ ತೆರಳಿದ್ದರು. ಬಳಿಕ 11 ಗಂಟೆಗೆ ವಾಪಸ್ ಬಂದು ನೋಡಿದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ತಕ್ಷಣ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಆದರೂ ಬೈಕ್ ಸುಳಿವು ಸಿಕ್ಕಿರಲಿಲ್ಲ.
ಇನ್ನೊಂದೆಡೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕೊಂದನ್ನು ಪೊಲೀಸರು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು. ಬೈಕ್ ಕಳವು ಮಾಡಿದ್ದ ಆರೋಪಿ ಅದರ ನಂಬರ್ ಪ್ಲೇಟ್, ಸಹಿತ ಕೆಲವೊಂದು ಭಾಗಗಳನ್ನು ಬದಲಾಯಿಸಿ ಮತ್ತೊಬ್ಬರಿಗೆ 80 ಸಾವಿರ ರೂ.ಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ 30 ಸಾವಿರ ರೂ. ಪಡೆದು, ಉಳಿದ ಹಣವನ್ನು ವಾಹನದ ದಾಖಲೆಗಳನ್ನು ನೀಡಿದ ಬಳಿಕ ಪಡೆಯುವುದಾಗಿ ತಿಳಿಸಿದ್ದ. ಖರೀದಿಸಿದ ವ್ಯಕ್ತಿ ಬೈಕನ್ನು ಮನೆಗೆ ತಂದು ನಿಲ್ಲಿಸಿದ್ದರು.
ಈ ನಡುವೆ ಮಂಜೇಶ್ವರ ಭಾಗದ ಅಪರಿಚಿತ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ, ಅನುಮಾನಾಸ್ಪದ ಬೈಕೊಂದು ಇರುವುದಾಗಿ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಬೈಕನ್ನು ಮತ್ತೊಬ್ಬರಿಂದ 30 ಸಾವಿರ ರೂ. ನೀಡಿ ಖರೀದಿಸಿರುವುದಾಗಿ ಹಾಗೂ ದಾಖಲೆಗಳನ್ನು ನೀಡಿದ ಬಳಿಕ ಉಳಿದ ಹಣ ಪಾವತಿಸುವುದಾಗಿ ಖರೀದಿದಾರರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬೈಕಿನ ಆರ್.ಸಿ. ದಾಖಲೆ ಹಾಗೂ ಚಾಸಿಸ್ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ರಮೇಶ್ ಕುಲಾಲ್ ಅವರಿಗೆ ಸೇರಿದ ಬೈಕ್ ಎಂಬುದು ಖಚಿತವಾಯಿತು. ತಕ್ಷಣ ಅವರನ್ನು ಸಂಪರ್ಕಿಸಿ ಬೈಕನ್ನು ಬಂಟ್ವಾಳ ಪೊಲೀಸ್ ಠಾಣೆಗೆ ತಲುಪಿಸಲಾಯಿತು. ಅಗತ್ಯ ಪೊಲೀಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬೈಕನ್ನು ರಮೇಶ್ ಅವರ ವಶಕ್ಕೆ ನೀಡಲಾಯಿತು. ಕಳೆದುಹೋದ ಬೈಕ್ ಮತ್ತೆ ಸಿಗುತ್ತದೆ ಎಂಬ ನಿರೀಕ್ಷೆಯನ್ನೇ ಕಳೆದುಕೊಂಡಿದ್ದ ರಮೇಶ್ ಅವರಿಗೆ ಮಹಿಳೆಯೊಬ್ಬರ ದೂರವಾಣಿ ಕರೆ ಮೂಲಕ ಬೈಕ್ ಪತ್ತೆಯಾದದ್ದು ಅಚ್ಚರಿ ಹಾಗೂ ಸಂತಸ ತಂದಿದೆ.
“ನಾನು ಕಳೆದ 40 ವರ್ಷಗಳಿಂದ ಕಲ್ಲುರ್ಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕಟೀಲು ಕ್ಷೇತ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಳೆದುಹೋದ ನನ್ನ ಬೈಕನ್ನು ಮಹಿಳೆಯ ರೂಪದಲ್ಲಿ ಬಂದು ಕಲ್ಲುರ್ಟಿ ಅಮ್ಮನೇ ಮರಳಿ ಕೊಡಿಸಿದ್ದಾರೆ ಎಂಬ ಬಲವಾದ ನಂಬಿಕೆ ನನಗಿದೆ. ಇದು ತಾಯಿಯ ಕಾರಣಿಕವೇ ಹೊರತು ಬೇರೇನಲ್ಲ” ಎಂದು ರಮೇಶ್ ಕುಲಾಲ್ ನಡೆದ ಘಟನೆಯನ್ನು ವಿವರಿಸಿದ್ದಾರೆ.
ತುಳುನಾಡಿನ ದೈವದೇವರುಗಳು ತಮ್ಮನ್ನು ನಂಬಿ ಆರಾಧಿಸುವ ಭಕ್ತರನ್ನು ಸದಾ ಕಾಪಾಡುತ್ತವೆ ಎಂಬ ನಂಬಿಕೆಗೆ ಇಂತಹ ಘಟನೆಗಳು ಮತ್ತಷ್ಟು ಪುಷ್ಟಿ ನೀಡುವಂತಿದೆ.
Advertisement







