
ಬಂಟ್ವಾಳ: ಸಮಾಜದ ದೀನ ದುರ್ಬಲರ ಸೇವೆ ಮಾಡುವ ಮೂಲಕ ಸೇವೆಯಲ್ಲಿಯೇ ದೇವರನ್ನು ಕಾಣುವ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಅವರ ಕಾರ್ಯ ಶ್ಲಾಘನೀಯ ಹಾಗೂ ಎಲ್ಲರಿಗೂ ಮಾದರಿಯಾದದ್ದು ಎಂದು ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಝ್ ಎಚ್. ಟಿ. ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ಹಾಗೂ ದವಸ ಧಾನ್ಯ ವಿತರಿಸಿ ಮಾತನಾಡಿದರು. ಕ್ಷಯ ಮುಕ್ತ ಸಮಾಜ ನಿರ್ಮಾಣ ಸುಲಭದ ಕಾರ್ಯವಲ್ಲ. ಕೃಷ್ಣ ಕುಮಾರ್ ಪೂಂಜ ಅವರು ಅಂತಹ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.


ಆರೋಗ್ಯ ಇಲಾಖೆಯ ಡೇವಿಡ್, ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರು ಕ್ಷಯ ರೋಗಿಗಳಿಗೆ ಆಹಾರ ಕಿಟ್ ನೀಡುವುದರ ಜೊತೆಗೆ ಪ್ರತೀ ರೋಗಿಗಳ ಆಹಾರ ಕಾಳಜಿಯನ್ನು ವಹಿಸುತ್ತಾರೆ. ಆರೋಗ್ಯ ಇಲಾಖೆ ಮಾಡುವ ಅರ್ಧ ಕೆಲಸವನ್ನು ಅವರೇ ಮಾಡುತ್ತಾರೆ ಎಂದರು.
ಫರಂಗಿಪೇಟೆ ಆಂಜನೇಯ ದೇವಸ್ಥಾನದ ಅಧ್ಯಕ್ಷ ಎಸ್. ಚಂದ್ರಶೇಖರ ಗಾಂಭೀರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಪ್ರಾಸ್ತಾವಿಕವಾಗಿ ಮಾತನಾಡಿ
50 ನೇ ತಿಂಗಳ ಕಾರ್ಯಕ್ರಮ ಇದಾಗಿದ್ದು ದ ಸುಮಾರು 18.50 ಲಕ್ಷ ರೂ. ವೆಚ್ಚದಲ್ಲಿ ಈವರೆಗೆ ಒಟ್ಟು 268 ಮಂದಿ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಮೀನಾಕ್ಷಿ ನಾರಾಯಣ, ಟ್ರಸ್ಟಿ ಪ್ರಕಾಶ್ ಕಿದೆಬೆಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ನಾರಾಯಣ ಬಡ್ಡೂರು, ಪ್ರಶಾಂತ್ ತುಂಬೆ, ಶೇಖರ ಕಲ್ಲತಡಮೆ, ಚಂದ್ರಹಾಸ ಕಡೆಗೋಳಿ, ವೃಂದ ಪೂಜಾರಿ,ಶೋಭಾ ಕಳ್ಳಿಗೆ, ಗಾಯತ್ರಿ
,ಉಮಾಚಂದ್ರಶೇಖರ್, ಸಾರಮ್ಮ ಮತ್ತಿತರರು ಉಪಸ್ಥಿತರಿದ್ದರು. ಎನಪೋಯ ಆಸ್ಪತ್ರೆಯ ಸಮುದಾಯ ಅಭಿವೃದ್ದಿ ವಿಭಾಗದ ಡಾ. ಮಾಳವಿಕ, ಡಾ.ಅನುಪಮ ನಾಯರ್ ಕ್ಷಯ ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದರು.
Advertisement







