
ಬಂಟ್ವಾಳ: ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು
ಇದರ ನೃತ್ಯ ನಿರ್ದೇಶಕಿ, ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಅವರ ಶಿಷ್ಯೆಯರು, ಕಲ್ಲಡ್ಕದ ಸಹೋದರಿಯರಾದ ವಿದುಷಿ ಶ್ರದ್ದಾ ಮತ್ತು ಶ್ರಮ್ಯ ಅವರ ಭರತನಾಟ್ಯ ರಂಗಪ್ರವೇಶ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಸಂಜೆ ಕಾರ್ಯಕ್ರಮವನ್ನು ದೀಪಪ್ರಜ್ವಲನಗೊಳಿಸುವ ಮೂಲಕ ಚಾಲನೆ ನೀಡಿದ ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ, ತಪಸ್ಸಿನಂತೆ ಸಾಧನೆ ಮಾಡಿದರಷ್ಟೇ ನೃತ್ಯಕಲೆಯಲ್ಲಿ ಪ್ರಗತಿ ಕಾಣಲು ಸಾಧ್ಯ. ಎಷ್ಟೇ ಆಧುನಿಕತೆ ಬಂದರೂ ಕಲೆಯಲ್ಲಿ ಸಂಪ್ರದಾಯವನ್ನು ಉಳಿಸಬೇಕು ಎಂದು ತಿಳಿಸಿದರು. ಇಪ್ಪತ್ತು ವರ್ಷಗಳ ಅವರ ಪರಿಶ್ರಮ ನೃತ್ಯದಲ್ಲಿ ಕಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ ಇಬ್ಬರೂ ಸಹೋದರಿಯರಲ್ಲೂ ಉತ್ತಮವಾಗಿ ಕಲೆ ಆವೀರ್ಭವಿಸಿದೆ.
ನಾಟ್ಯ ಕಲಿತವರಲ್ಲಿ ರಾಗ ಭಾವ ತಾಳ ಸಮ್ಮೀಳತವಾಗಿ ವಿದ್ಯೆಯಯಲ್ಲೂ ಅವರು ಉತ್ತಮ ಸಾಧನೆ ಮಾಡುತ್ತಾರೆ ಎಂದರು.
ಸನಾತನ ನಾಟ್ಯಲಯದ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ನಾಟ್ಯವೆಂದರೆ ಅದು ಕೇವಲ ಹೆಜ್ಜೆ, ಕುಣಿತ ಮಾತ್ರವಾಗಿರದೆ ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ ಭಾವ ಒಳಗೊಂಡ ಸುಂದರ ಸಮನ್ವಯ. ನಾಟ್ಯ ಕಲೆಗೆ ಮಾತ್ರವಲ್ಲದೆ ಜೀವನದ ಭಾವನೆಗಳನ್ನೂ ಅದು ಅಭಿವ್ಯಕ್ತ ಮಾಡುತ್ತದೆ ಎಂದರು.

ಮಂಗಳೂರು ದಾಯ್ದಿವರ್ಲ್ಡ್ ಟಿವಿ ವಾಹಿನಿಯ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಸಹನೆ, ಗುರಿ, ಛಲ ಇದ್ದವರು ಸಾಧನೆ ಮಾಡುತ್ತಾರೆ. ಇಂದಿನ ಝೆನ್ಝಿ, ರೀಲ್ ಯುಗದಲ್ಲಿ ಮಕ್ಕಳನ್ನು ಒಂದೆಡೆ ಕಟ್ಟಿಡುವುದು ಸುಲಭದ ಮಾತಲ್ಲ. ಆದರೆ ಈ ಇಬ್ಬರು ಮಕ್ಕಳು ಉತ್ತಮ ಸಾಧನೆ ಮಾಡಿದ್ದು ಅವರ ಪೋಷಕರು ಅಭಿನಂದನಾರ್ಹರು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕಿ ಭಾರತಿ ಜಿ. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾವ, ರಾಗ, ತಾಳದ ಸಮ್ಮಿಲನವಾಗಿರುವ ಭರತನಾಟ್ಯ ಕಲೆ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಸಾಧನ. ಸಹೋದರಿಯರ ರಂಗಪ್ರವೇಶದ ನೃತ್ಯ ಕಾರ್ಯಕ್ರಮದಿಂದ ಹೃದಯ ತುಂಬಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಹಿಮ್ಮೇಳ ಕಲಾವಿದರನ್ನು ಗೌರವಿಸಲಾಯಿತು. ಸಹೋದರಿಯರು ತಮ್ಮ ನೃತ್ಯ ಗುರುವನ್ನು ಗುರು ಕಾಣಿಕೆ ನೀಡಿ ಗೌರವಿಸಿದರು.
ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ನೃತ್ಯಗುರು ರೋಹಿಣಿ ಉದಯ್ ತಮ್ಮ ಪ್ರಾಸ್ತವಿಕ ಮಾತಿನಲ್ಲಿ ಶಿಷ್ಠೆಯರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರದ್ಧಾ ಮತ್ತು ಶ್ರಮ್ಯ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅವರ ಪೋಷಕರಾದ ಮೋಹನ ಕಲ್ಲಡ್ಕ ಮತ್ತು ರೂಪಕಲಾ ಮತ್ತು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಸಂಚಾಲಕ ಉದಯ ವೆಂಕಟೇಶ ಭಟ್ ಉಪಸ್ಥಿತರಿದ್ದರು. ಹಿಮ್ಮೇಳದ ಹಾಡುಗಾರಿಕೆಯಲ್ಲಿ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಜಯರಾಮ್ ಬೆಂಗಳೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ ವೆಂಕಟರಮಣ ಬೆಂಗಳೂರು, ನೃತ್ಯನಿರ್ದೇಶನ ಮತ್ತು ನಟುವಾಂಗದಲ್ಲಿ ವಿದುಷಿ ರೋಹಿಣಿ ಉದಯ್, ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ ವೈಧಾತ್ರಿ ಬೆಂಗಳೂರು, ರಿದಂ ಪ್ಯಾಡ್ ನಲ್ಲಿ ಡಿ.ವಿ. ಪ್ರಸನ್ನ ಕುಮಾರ್ ಬೆಂಗಳೂರು ಸಹಕರಿಸಿದರು. ವಿಪ್ಪೇಶ್ ಕಲ್ಲಡ್ಕ ಸ್ವಾಗತಿಸಿದರು. ಶ್ವೇತಾ ಅರೆಹೊಳೆ ಕಾರ್ಯಕ್ರಮ ನಿರ್ವಹಿಸಿದರು. ರೂಪಕಲಾ ವಂದಿಸಿದರು. ಬಳಿಕ ಸಹೋದರಿಯರಿಂದ ನೃತ್ಯ ಪ್ರದರ್ಶನ ಮುಂದುವರಿಯಿತು.
Advertisement







