
ಬಂಟ್ವಾಳ: ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸಭೆ ಮಂಚಿ ಕುಕ್ಕಾಜೆಯಲ್ಲಿರುವ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಸಂಘವು ವರದಿ ಸಾಲಿನಲ್ಲಿ 2.10 ಕೋಟಿ ರೂ. ವ್ಯವಹಾರ ನಡೆಸಿ 11,06,860 ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಅಧ್ಯಕ್ಷ ಕೆ. ನಿಶ್ಚಲ್ ಜಿ.ಶೆಟ್ಟಿ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರು ಹೈನುಗಾರಿಕೆಯ ಮೂಲಕ ಹೇಗೆ ಲಾಭ ಪಡೆಯಬಹುದು, ಈ ವೃತ್ತಿಯನ್ನು ಲಾಭದಾಯಕವಾಗಿ ಹೇಗೆ ವಿಸ್ತರಣೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಚಿಂತನಶೀಲರಾಗಬೇಕು ಈ ಮೂಲಕ ಸಹಕಾರ ಕ್ಷೇತ್ರದಲ್ಲಿ ಎತ್ತರಕ್ಕೇರೋಣ ಎಂದು ಆಶಯ ವ್ಯಕ್ತಪಡಿಸಿದರು. ಸಂಘದ ಅಭಿವೃದ್ದಿಗೆ ಸದಸ್ಯರೆಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಕೇಶವ ರಾವ್ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು ಸಂಘದ ಕಾರ್ಯಚಟುವಟಿಕೆಯ ಬಗ್ಗೆ ತಿಳಿಸಿದರು. ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಪ್ರಪುಲ್ಲಾ ಪಿ.ಎ. ಹಾಲು ಒಕ್ಕೂಟದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರಾಸು ಖರೀದಿ, ಹಾಲು ಕರೆಯುವ ಯಂತ್ರ ಖರೀದಿ, ದ.ಕ. ಹಾಲು ಒಕ್ಕೂಟದಿಮದ ಸಿಗುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಕೆ. ಶಿವಶಂಕರ್ ರಾವ್ ವರದಿ ವಾಚಿಸಿ ಮುಂದಿನ ಸಾಲಿನ ಬಜೆಟ್ ಮಂಡಿಸಿದರು.

ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸಂಘದ ನಿರ್ದೆಶಕ ಚಂದಪ್ಪ ಕಂಚಿನಡ್ಕ ಅವರ ಪುತ್ರಿ ಅನುಪಮ ಕೆ. ಅವರನ್ನು ಅಭಿನಂದಿಸಲಾಯಿತು. ಶೇ.80ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ಕೆ. ಚಂದ್ರಶೇಖರ ಶೆಟ್ಟಿ, ಕೆ. ನಾಗರಾಜ ಪಕ್ಕಳ, ಕೆ. ಗೋಪಾಲ, ಸುಮತಿ ಕೆ., ವೇದಾವತಿ, ಎನ್. ಮೋಹನ್ ಶೆಟ್ಟಿ, ಗೋಪಾಲ ನಾಯ್ಕ ಪಿ., ಕೆ. ಅನಿಲ್ ಲೂವಿಸ್, ಸಶಿರಾಜ ಕಂಚಿಲ, ಸುನೀತಾ ಕೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕೇಶವರಾವ್ ಸ್ವಾಗತಿಸಿ, ನಿರ್ದೆಶಕ ಚಂದಪ್ಪ ಕಂಚಿನಡ್ಕ ವಂದಿಸಿದರು. ಕಾರ್ಯದರ್ಶಿ ಕೆ. ಶಿವಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.


Advertisement







