
ಬಂಟ್ವಾಳ: ತುರ್ತು ಸಂದರ್ಭದಲ್ಲಿ ಜನರಿಗೆ ಆಗೂ ಆಸ್ಪತ್ರೆಗಳ ರಕ್ತನಿಧಿಗೆ ರಕ್ತದ ಅವಶ್ಯಕತೆ ಇದ್ದಾಗ ಸೇವಾಂಜಲಿ ಸಂಸ್ಥೆ ನಿರಂತರ ಶಿಬಿರಗಳನ್ನು ಹಮ್ಮಿಕೊಂಡು ರಕ್ತದ ಬೇಡಿಕೆಯನ್ನು ಪೂರೈಸುತ್ತಿರುವುದು ಉತ್ತಮ ಕಾರ್ಯ ಎಂದು ಬಂಟ್ವಾಳ ಉಪವಿಭಾಗದ ಸಹಾಯಕ ಅಧೀಕ್ಷಕ ಯಶ್ ಕುಮಾರ್ ಶರ್ಮ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ , ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ 135 ನೇ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ, ಸ್ವಯಂ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಗರ ಭಾಗದಲ್ಲಿ ಬ್ಲಡ್ ಬ್ಯಾಂಕ್ ಗಳು ಅಗತ್ಯ ಸಂದರ್ಭದಲ್ಲಿ ರಕ್ತ ಒದಗಿಸುವ ಕೆಲಸಮಾಡುತ್ತದೆ ಆದರೆ ಗ್ರಾಮೀಣ ಭಾಗಗಳಲ್ಲಿ ಅತಂಹ ವ್ಯವಸ್ಥೆಗಳು ಇರುವುದಿಲ್ಲ. ಸೇವಾಂಜಲಿ ಸಂಸ್ಥೆ ಹಲವು ವರ್ಷಗಳಿಂದ ಇಂತಹ ಸೇವಾ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ರೋಟರಿ ಜಿಲ್ಲೆ 3181ನ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದ ಕೊರತೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಆಸ್ಪತ್ರೆಗಳ ಬೇಡಿಕೆಗನುಗುಣವಾಗಿ ಸೇವಾಂಜಲಿ ಸಂಸ್ಥೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ.
ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಅವರು
ಅನೇಕ ಸಂಸ್ಥೆಗಳಿಗೆ ಪ್ರೇರಕರಾಗಿದ್ದು ಕೊಂಡು ಜನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿ ಮಾಡಬೇಕಾಧ ಕಾರ್ಯವನ್ನು ಅವರು ಮಾಡುತ್ತಿದ್ದು ಸ್ವಸ್ಥ, ಸುಂದರ ಸಮಾಜ ನಿರ್ಮಾಣವಾಗಲು ನಾವೆಲ್ಲಾ ಅವರೊಂದಿಗೆ ಕೈ ಜೋಡಿಸುವಂತೆ ತಿಳಿಸಿದರು.


ಸೇವಾಂಜಲಿಯ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಕೆಎಂಸಿ ಬ್ಲಡ್ ಬ್ಯಾಂಕಿನ ಅನಿಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಯುನಿಟ್ ರಕ್ತದಾನ ಮಾಡುವ ಮೂಲಕ 4 ಮಂದಿಯ ಪ್ರಾಣ ಉಳಿಸಲು ಸಾಧ್ಯವಿದ್ದು ಸ್ಚಯಂ ಪ್ರೇರಣೆಯಿಂದ ರಕ್ತದಾನದಲ್ಲಿ ಭಾಗವಹಿಸುವಂತೆ ತಿಳಿಸಿದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



ಪ್ರಮುಖರಾದ ಡಾ. ರಾಮಕೃಷ್ಣ ಇರ್ವತ್ತೂರು ಸುಕೇಶ್ ಶೆಟ್ಟಿ ತೇವು, ಅರ್ಜುನ್ ಪೂಂಜ, ಬಿ.ನಾರಾಯಣ ಮೇರಮಜಲು, ದಿನೇಶ್ ತುಂಬೆ, ಹರ್ಷ ರಾಜ್ ಸುಜೀರು, ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಮೋಹನ್ ಬೆಂಜನಪದವು, ಜಯಾನಂದ ನಾಯ್ಕ್ ಕುಮ್ಡೇಲು, ಧನರಾಜ್ ತುಂಬೆ, ಪ್ರಮೋದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 57 ಯುನಿಟ್ ರಕ್ತ ಸಂಗ್ರಹವಾಯಿತು.
Advertisement







