
ಮಂಗಳೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳೂರಿನ ಮೇರಿಹಿಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರರ ಬಾಲಕಿಯರ ನಿಲಯದ ರಜತ ಸಂಭ್ರಮದ ಹಾಸ್ಟೇಲ್ ಡೇ ಅಗಮ್ಯ-2026 ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು.


ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಬರೆದ ಮಂಗಳೂರಿನ ಪ್ರತಿಭಾವಂತ ಭರತನಾಟ್ಯ ಪಟು ರೆಮೋನಾ ಎವೆಟ್ ಪಿರೇರಾ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ನಮ್ಮ ಕನಸನ್ನು, ನಾವು ಮಾಡುವ ಕಾರ್ಯವನ್ನು ಪ್ರೀತಿಸಬೇಕು ಎಂದರು
ನೀವು ಪ್ರತಿಯೊಬ್ಬರು ಪ್ರತಿಭಾನ್ವಿತರು. ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ನಿರಂತರ ಪ್ರಯತ್ನ ಹಾಗೂ ಬದ್ಧತೆಯಿಂದ ಕೆಲಸ ಮಾಡಿದಾಗ ಸಾಧನೆ ಮಾಡಲು ಸಾಧ್ಯ ಆದ್ದರಿಂದ ಎಂದಿಗೂ ನಿಮ್ಮ ಪ್ರಯತ್ನವನ್ನು ಬಿಡಬೇಡಿ ಎಂದು ನಿಲಯದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಂದಿಕೂರು ಎಜುಕೇಷನ್ ಟ್ರಸ್ಟ್ ನ ಆಡಳಿತಾಧಿಕಾರಿ ಸಾಯಿನಾಥ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜೀತ ವಿಮುಕ್ತಿಗಾಗಿ ಶ್ರಮಿಸಿದವರು, ಹಿಂದುಳಿದವರ ಕಲ್ಯಾಣಕ್ಕಾಗಿ ಪರಿಶ್ರಮಿಸಿದವರು ಎಂದರು. ಸ್ನೇಹ, ಪ್ರೀತಿ, ಪ್ರಾಮಾಣಿಕತೆ, ಸತ್ಯ ಸಂದತೆ ಜೀವನಕ್ಕೆ ಅಮೃತತ್ವವನ್ನು ನೀಡುತ್ತದೆ. ಇದು ಕೇವಲ ವಿದ್ಯಾರ್ಥಿನಿಲಯ ಮಾತ್ರವಲ್ಲ ಸರಸ್ವತಿ ಮಂದಿರ ಎಂದ ಅವರ ಸಂಸ್ಕಾರಯುತರಾಗಿ ಬಾಳಬೇಕು ಎಂದು ತಿಳಿಸಿದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ
ಬಿಂದಿಯಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ
ಕನಸು ಕಾಣಬೇಕು, ಜೊತೆಗೆ ಕನಸು ನನಸಾಗಲು ಪರಿಶ್ರಮ ಪಡಬೇಕು. ಶಿಸ್ತಿನೊಂದಿಗೆ ಬದುಕು ಸಾಗಿಸಿದಾಗ ಸಾಧನೆ ಮಾಡಲು ಸಾದ್ಯ. ಭವಾನಿಯವರಂತಹ ಮೇಲ್ವಿಚಾರಕರಿದ್ದಾಗ ವಿದ್ಯಾರ್ಥಿ ನಿಲಯಗಳು ಹೊಸತನ ಹಾಗೂ ಸೃಜನಶೀಲತೆಯಿಂದ ಕೂಡಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿಲಯದ ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು. ನಿಲಯ ಪಾಲಕಿ ಭವಾನಿ ಅವರನ್ನು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿಲಯದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ಸಂಗಮೇಶ್, ರಾಯಿ ಶಾಲೆ ಶಿಕ್ಷಕ ಬಿದ್ದಪ್ಪ ದೊಡ್ಡ ಕರಿಯಪ್ಪ, ಮಂಗಳೂರು ಹಾಪ್ ಕಾಮ್ಸ್ ನಿರ್ದೇಶಕ ರವಿ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬಾಲಕಿಯರ ನಿಲಯ ಪಾಲಕಿ ಪುಷ್ಪಲತಾ, ವಿವಿಧ ನಿಲಯಗಳ ನಿಲಯ ಮೇಲ್ವಿಚಾರಕರಾದ ಶಶಿಕಲಾ ಶೆಟ್ಟಿ, ವಿಜಯಲಕ್ಷ್ಮೀ, ಗಾಯತ್ರಿ ಉಪಸ್ಥಿತರಿದ್ದರು.
ಮೇರಿಹಿಲ್ ವಿದ್ಯಾರ್ಥಿ ನಿಲಯ ಪಾಲಕಿ ಭವಾನಿ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.
ವಿದ್ಯಾರ್ಥಿಗಳಾದ ಇಂಚರ ವಂದಿಸಿದರು. ಲವೀಶಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Advertisement







