
ಬಂಟ್ವಾಳ: ಒಳ್ಳೆಯ ಮನಸ್ಸುಗಳು ಜೊತೆಗೂಡಿದಾಗ ಸತ್ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ ಎಂದು ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸುಜೀರು ದತ್ತನಗರದ ಶ್ರೀ ವೀರಹನುಮಾನ್ ಮಂದಿರದ 24ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರ ಹೆಸರಿನಲ್ಲೂ ರಾಮನಿದ್ದಾನೆ ಎಂದ ಅವರು ಹನುಮನನ್ನು ಉಪಾಸನೆ ಮಾಡಿದಾಗ ನಾವು ಕ್ರಿಯಾಶೀಲರಾಗುತ್ತೇವೆ ಎಂದು ತಿಳಿಸಿದರು. ದತ್ತನಗರದ ಮಂದಿರ ನಿರ್ಮಾಣಗೊಂಡು ಅರ್ಧ ಮಂಡಲ ಪೂರ್ಣಗೊಂಡಿದೆ. ಮುಂದಿನ ಬೆಳ್ಳಿ ಹಬ್ಬದ ಸಂಭ್ರಮದ ವೇಳೆಗೆ ಸಮಿತಿಯ ಬೇಡಿಕೆಯ ಸಭಾಭವನದ ನಿರ್ಮಾಣವಾಗಲಿದ್ದು ಎಲ್ಲರ ಸಹಕಾರ ಒದಗಿ ಬರಲಿದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ ಧಾರ್ಮಿಕ ಪರಿತ್ತಿನಿಂದ ಸಿಗುವ ಅನುದಾನದಡಿ ಮಂದಿರದ ಅಭಿವೃದ್ದಿಗೆ 5 ಲಕ್ಷ ಮೀಸಲಿಡುವುದಾಗಿ ತಿಳಿಸಿದರು. ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮಾತನಾಡಿದರು. ಉದ್ಯಮಿಗಳಾದ ಜಗದೀಶ್ ರೈ,
ಎಂಜಿನಿಯರ್ ಅಕ್ಷಯ್ ಅರ್ಕುಳ, ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ದತ್ತ ನಗರ, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಅಮೀನ್ ದತ್ತನಗರ ಸ್ವಾಗತಿಸಿದರು. ದಾಮೋದರ ಸಪಲ್ಯ ವಂದಿಸಿದರು. ರಮ್ಯ ರಂಜನ್ ಸುಜೀರು ಕಾರ್ಯಕ್ರಮ ನಿರೂಪಿಸಿದರು.
ಪೊಳಲಿ ಗಿರಿಪ್ರಕಾಶ್ ತಂತ್ರಿ ಇವರ ನೇತೃತ್ವದಲ್ಲಿ ಗಣಹೋಮ, ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ನಡೆಯಿತು.


Advertisement







