
ಆಗ ಬೆಳ್ಳಾರೆಯಲ್ಲಿ ಪದವಿ ಪೂರ್ವ ತರಗತಿ ಮುಗಿಸಿದ್ದೇನಷ್ಟೆ. ಇನ್ನೇನು ಪದವಿ ತರಗತಿಗೆ ಸೇರಬೇಕೆನ್ನುವಷ್ಟರಲ್ಲಿ, ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರಿಂದ ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು. ಆಗ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮಕುಂಜ ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿಯೋ ಏನೋ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಕುರಿತಾಗಿನ ಪ್ರಜ್ಞೆ ನನ್ನನ್ನು ಆಂತರಿಕವಾಗಿ ಎಚ್ಚರಿಸುತ್ತಿತ್ತು; ಇದಕ್ಕೆ ನಮ್ಮ ತಾಯಿಯವರ ಮುತುವರ್ಜಿಯೂ ಕಾರಣವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ನಾನು ಶಾಖೆ ನಡೆಸುತ್ತಿದ್ದಾಗ ಅವರು ನಮ್ಮ ರಕ್ಷಕರಾಗಿ ಕಾವಲು ಕಾಯುತ್ತಿದ್ದರು; ಇದಕ್ಕೆ ಕಾರಣವೂ ಇತ್ತು, ಅಲ್ಲೇ ಪಕ್ಕದಲ್ಲಿ ರಾಮಕುಂಜೇಶ್ವರನು ಉದ್ಭಸಿದನೆಂಬುದಾಗಿ ನಂಬಲಾದ ದೊಡ್ಡದಾದ ಬಿಲದ್ವಾರವೊಂದಿತ್ತು, ಅದಕ್ಕಾಗಿ ಅಮ್ಮನಿಗೆ ಭಯ, ಹೇಗಿದ್ದರೂ ನಾವು ಸಣ್ಣ ಮಕ್ಕಳು ಬೇರೆ.


ಈ ರಾಷ್ಟ್ರದ ಮೇಲಿನ ಅವ್ಯಕ್ತವಾದ ಭಕ್ತಿ ಒಂದು ಕಡೆಯಾದರೆ ನಮ್ಮ ತಾಯಿಯವರ ಉತ್ಸಾಹಭರಿತ ಉತ್ತೇಜನದಿಂದಾಗಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ನಾನಂತೂ ಅನುವು ಮಾಡಿಕೊಂಡೆ. ಆದರೆ ಸಮಸ್ಯೆ ಅಂದರೆ, ಅಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೂ ಅನ್ಯಾನ್ಯ ಕಾರಣಗಳಿಂದಾಗಿ ಸ್ವಲ್ಪಮಟ್ಟಿಗೆ ನಾನೂ ಜವಾಬ್ದಾರಿಗಳನ್ನು ವಹಿಸಲೇ ಬೇಕಾಗಿತ್ತು. ಭೂ ಮಸೂದೆಯಿಂದಾಗಿ ಕೃಷಿ ಭೂಮಿಯೆಲ್ಲವೂ ಒಕ್ಕಲಿನವರ ಕೈ ಸೇರಿತ್ತು, ಬಡತನದ ರುಚಿ ಕಾಡಲಾರಂಭಿಸಿತ್ತು. ಇದರ ವಿರುದ್ಧ ಹೋರಾಟ ಮಾಡಲು ಅಮ್ಮನ ಬತ್ತಳಿಕೆಯಲ್ಲಿ ಎಷ್ಟೇ ಬಾಣಗಳು ಇದ್ದರೂ ಕೂಡ ಪರಿಣಾಮಕ್ಕೊಂದು ಮೂಲ ನೆಲೆ ಬೇಕಲ್ವೆ? ಅಮ್ಮನದ್ದು ದುಡಿದು ತಿನ್ನುವ ಜಾಯಮಾನ, ಹಾಗಾಗಿ ಒಂದು ಕಡೆಯಿಂದ ಸು.ನಾಲ್ಕು ಕಳಸೆ ಗದ್ದೆ , ಸು.150 ಅಡಕೆ ಮರಗಳ ಮಧ್ಯೆ ಅಮ್ಮನ ದುಡಿತವಾದರೆ, ಇನ್ನೊಂದು ಕಡೆಯಿಂದ ನಾನು ದೇವಸ್ಥಾನ, ಬೇರೆ ಬೇರೆ ಮನೆಗಳಲ್ಲಿ ಪೂಜೆ ಇತ್ಯಾದಿಗಳಿಂದ ಜೀವನ ಹಾಗೂ ಹೀಗೂ ಸಾಗುತ್ತಿತ್ತು.

ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ಕಿಚ್ಚು ಎಲ್ಲೆಲ್ಲೂ ಕಾಣಲಾರಂಭಿಸಿತು. ಹಿರಿಯ ಮಿತ್ರರಿಂದ, ರಾಸ್ವ ಸಂಘದ ಕಾರ್ಯಕರ್ತರಿಂದ ಹೋರಾಟದಲ್ಲಿ ಭಾಗಿಯಾಗುವಂತೆ ಕರೆಗಳು ಬರಲಾರಂಭಿಸಿತು. ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು ಅನ್ನುವ ಸ್ಥಿತಿ ನನ್ನದು, ಉತ್ಸಾಹಕ್ಕೆ ಮೇರೆಯಿಲ್ಲ; ಮನಸ್ಸಿನೊಳಗೆಯೇ ಭಾರತ ಮಾತಾಕೀ ಜೈ ಧ್ವನಿಸುತ್ತಿತ್ತು.
Advertisement







