
ಬಂಟ್ವಾಳ: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ 16ನೇ ವಾಮಂಜೂರು ಶಾಖೆ ವಾಮಂಜೂರಿನ ಬಾವಾ ಬಿಲ್ಡರ್ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಬುಧವಾರ ಶುಭಾರಂಭಗೊಂಡಿತು.
ಮಾಜಿ ಸಚಿವ ಬಿ.ರಮಾನಾಥ ರೈ ನೂತನ ಶಾಖೆ ಉದ್ಘಾಟಿಸಿದರು. ಅವರು ಮಾತನಾಡಿ ದುರ್ಲಬವಾದ ಮನುಷ್ಯ ಜನ್ಮವನ್ನು ಒಳ್ಳೆಯ ಕಾರ್ಯದ ಮೂಲಕ ಸಾರ್ಥಕಗೊಳಿಸಬೇಕು. ವಿಶ್ವ ಮಾನವರಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಸಂಜೀವ ಪೂಜಾರಿಯವರು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವನ್ನು ಸ್ಥಾಪಿಸಿ, ಮೂರ್ತೆದಾರರ ಸಮುದಾಯ ಆರ್ಥಿಕವಾಗಿ ಬಲಯುತವಾಗ ಬೇಕೆನ್ನುವ ಉದ್ದೇಶದಿಂದ ಮಾಡಿದ ಕೆಲಸ ಶ್ರೇಷ್ಠವಾದುದು. ಇದರ ಎಲ್ಲಾ 16 ಶಾಖೆಗಳನ್ನು ಉದ್ಘಾಟಿಸಲು ಸಿಕ್ಕಿರುವ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಭದ್ರತಾ ಕೋಶವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಕೆಲವು ಸಹಕಾರಿ ಬ್ಯಾಂಕ್ಗಳ ಲಾಭಂಶ ಕೇವಲ ಪುಸ್ತಕದಲ್ಲಿ ಮಾತ್ರ ದಾಖಲಾಗಿರುತ್ತದೆ. ಅಂತಹ ಸಂಘಗಳಿಗೆ ಹೆಚ್ಚಿನ ಶಾಖೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘ ಲಾಭದ ಜೊತೆಗೆ ಹೆಚ್ಚಿನ ಶಾಖೆಗಳನ್ನು ಮಾಡಿದೆ. ಇದೊಂದು ಉತ್ತಮ ಕಾರ್ಯ ಎಂದರು.

ಮೂರ್ತೆದಾರರ ಮಕ್ಕಳು ಉನ್ನತ ಸ್ತರದಲ್ಲಿ ಕಾಣಿಸಿಕೊಳ್ಳ ಬೇಕಾದರೆ ಸಮಾಜದ ಜವಾಬ್ದಾರಿಯೂ ಇದೆ. ಇಂತಹ ಸಹಕಾರಿ ಸಂಘ ಇದ್ದಾಗ ಅದು ಸುಲಭವಾಗಲಿದೆ ಎಂದ ಅವರು ನಾವೆಲ್ಲರೂ ಒಂದು ಎನ್ನುವ ಅಭಿಮಾನ ಇದ್ದಾಗ ಅಭಿವೃದ್ದಿ ಸಾಧ್ಯವಿದೆ. ಮನುಷ್ಯತ್ವಕ್ಕೆ ಬೆಲೆ ಕೊಡುತ್ತಾ ಸಮಾಜದಲ್ಲಿ ಶಾಂತಿಯ ವಾತವಾರಣ ನಿರ್ಮಾಣವಾಗ ಬೇಕಾದರೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕು ಎಂದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಶಾಖೆಯನ್ನು ಅಳದಂಗಡಿಯಲ್ಲಿ ಉದ್ಘಾಟಿಸಲು ಯೋಜನೆ ರೂಪಿಸಲಾಗಿದೆ. ಜನರ ಸಹಕಾರದಿಂದ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಲು ಹೊಸ ಹುರುಪು, ಧೈರ್ಯ ಬಂದಿದೆ ಎಂದು ತಿಳಿಸಿದರು. ಸಜೀಪಮೂಡದಲ್ಲಿ 50 ಸೆಂಟ್ಸ್ ಜಾಗದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಪ್ರಧಾನ ಕಚೇರಿ ನಿರ್ಮಾಣವಾಗಲಿದೆ. ಇದಕ್ಕೂ ಮುಂಚಿತವಾಗಿ ಸಂಘದ 25 ಶಾಖೆ ಮಾಡಿ 100 ಮಂದಿ ಮಹಿಳೆಯರಿಗೆ ಉದ್ಯೋಗ ಕೊಡಿಸಿ ರಾಜ್ಯದಲ್ಲೇ ಮಾದರಿ ಸಂಘಟನೆಯನ್ನಾಗಿ ರೂಪಿಸಬೇಕು ಎಂದರು. ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ನಿರಖು ಠೇವಣಿ ಬಿಡುಗಡೆಗೊಳಿಸಿದರು. ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಉಳಿತಾಯ ಖಾತೆ ಹಸ್ತಾಂತರಿಸಿದರು.
ಮಾಜಿ ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಗಣೇಶ್ ಪೂಜಾರಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಾಮಂಜೂರು ಇಸ್ಲಾಹುಲ್ ಇಸ್ಲಾಂ ಮದರಸ ಮತ್ತು ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ರಹಿಮಾನ್ ಕೋಯ, ವಾಮಂಜೂರು ಬಿಲ್ಲವ ಸಂಘದ ಅಧ್ಯಕ್ಷ ಮಾರಪ್ಪ ಪೂಜಾರಿ, ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಜಯಂತಿ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾದ ಪದ್ಮನಾಭ ಕೋಟ್ಯಾನ್, ಶಿವಪ್ಪ ಸುವರ್ಣ, ಉದ್ಯಮಿ ವೀರಣ್ಣ ಎಂ. ಪೂಜಾರಿ, ವಾಮಂಜೂರು ವಿಶ್ವಕರ್ಮ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ, ನೇತಾಜಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ ಉಪಸ್ಥಿತರಿದ್ದರು.

ನಿರ್ದೆಶಕರಾದ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು, ಅರುಣ್ ಕುಮಾರ್ ಎಂ. ವಂದಿಸಿದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನ ಪಾಲು, ಜಯಶಂಕರ್ ಕಾನ್ಸಲೆ, ಸುಜಾತ ಎಂ., ವಾಣಿ ವಸಂತ, ಆಶಿಶ್ ಪೂಜಾರಿ, ಚಿದಾನಂದ ಎಂ. ಕಡೇಶ್ವಾಲ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
Advertisement







