
ಬಂಟ್ವಾಳ: ಪಂಜಿಕಲ್ಲು ಗ್ರಾಮದಲ್ಲಿ 10 ವರ್ಷಗಳಿಂದ ಹಂದಿ ಸಾಕಾಣಿಕೆಯ ಗೂಡಿನಲ್ಲಿ ಗುಡಿಸಲು ನಿರ್ಮಿಸಿ ಕೊಂಡು ಜೀವನ ನಡೆಸುತ್ತಿದ್ದ ಬಡಕುಟುಂಬಕ್ಕೆ ಸುಸಜ್ಜಿತ ಸ್ವಂತ ಮನೆಯ ಕನಸೊಂದು ಸಾಕಾರಗೊಳ್ಳುತ್ತಿದೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ಪಂಜಿಕಲ್ಲು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್ ಮುಂದಾಳತ್ವದಲ್ಲಿ, ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಾಣ ಕಾರ್ಯ ನಡೆದಿದೆ. ಗುಡಿಸಲಿನಲ್ಲಿ ವಾಸವಿದ್ದರೂ ಈ ಮನೆಯ ಹುಡುಗನ ಶೈಕ್ಷಣಿಕ ಸಾಧನೆ ಮನೆ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ.

ಪಂಜಿಕಲ್ಲು ಗ್ರಾಮದ ಸೋಮಶೇಖರ್ ಹಾಗೂ ಸುಶೀಲ ದಂಪತಿ ಕುಂಜರಬೆಟ್ಟು ಎಂಬಲ್ಲಿ ತಮ್ಮ ಸ್ವಂತ ಮನೆಯಲ್ಲಿ ವಾಸಗಿದ್ದರು. 10 ವರ್ಷಗಳ ಹಿಂದೆ ಈ ಹಳೆಯ ಮನೆ ಜೀರ್ಣಾವಸ್ಥೆಗೆ ತಲುಪಿ ಕುಸಿದು ಬಿದ್ದಿತ್ತು. ಬಡತನದಲ್ಲಿ ಜೀವನ ನಡೆಸುತ್ತಿದ್ದ ಇವರಿಗೆ ಹೊಸ ಮನೆ ನಿರ್ಮಿಸಲು ಸಾಧ್ಯವಾಗದೇ ಇದರ ಪಕ್ಕದಲ್ಲೇ ಪಾಳುಬಿದ್ದಿದ್ದ ಹಂದಿ ಸಾಕಾಣಿಕೆಯ ಗೂಡಿಗೆ ಸಿಮೆಂಟ್ ಶೀಟು ಇಟ್ಟು, ಟರ್ಪಾಲು ಹಾಸಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು. ಈ ದಂಪತಿಗೆ 3 ಮಂದಿ ಮಕ್ಕಳು. ಓರ್ವ ಪುತ್ರ ಇವರ ಜೊತೆಗಿದ್ದು ಇಬ್ಬರು ಮಕ್ಕಳು ಸುಶೀಲ ಅವರ ತಾಯಿಯ ಮನೆಯಲ್ಲಿ ವಾಸವಿದ್ದಾರೆ. ಈ ಗುಡಿಸಲಿನಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದರು

ಮನೆ ನಿರ್ಮಾಣ ಸಾಕಾರಗೊಂಡಿದ್ದು ಹೀಗೆ:
ಸೋಮಶೇಖರ್ ಹಾಗೂ ಸುಶೀಲ ದಂಪತಿಯ ದ್ವಿತೀಯ ಪುತ್ರ ಗಣೇಶ್ ಪ್ರತಿಭಾವಂತ. 3 ವರ್ಷದ ಹಿಂದೆ ಈತ ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 550 ಅಂಕಗಳನ್ನು ದಾಖಲಿಸಿದ್ದ. ಶಾಲೆಯ ಐದು ಮಂದಿ ಸಾಧಕರ ಅಭಿನಂದನಾ ಫ್ಲೆಕ್ಸ್ ನಲ್ಲಿ ಗಣೇಶ್ ನ ಭಾವಚಿತ್ರವೂ ಅಚ್ಚಾಗಿತ್ತು. ಇದನ್ನು ಅಂದು ಗಮನಿಸಿದ್ದ ದೇವಪ್ಪ ಕುಲಾಲ್ ಅವರು ಈ ಬಾಲಕನನ್ನು ಅಭಿನಂದಿಸಲು ಮನೆಯನ್ನು ಹುಡಿಕೊಂಡು ಬಂದಾಗ ಅಚ್ಚರಿ ಕಾದಿತ್ತು. ವಿದ್ಯುತ್ ಬೆಳಕೇ ಇಲ್ಲದ ಗುಡಿಸಲಿನಲ್ಲಿ ವಾಸವಿದ್ದರೂ, ಬಡತನವನ್ನು ಮೀರಿ ಸಾಧನೆ ಮಾಡಿದ್ದ ಬಾಲಕನ ಬಗ್ಗೆ ಅವರಿಗೆ ಹೆಮ್ಮೆಯೆನಿಸಿತು. ಈ ಬಡ ಕುಟುಂಬಕ್ಕೆ ತಕ್ಕಮಟ್ಟಿನ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಿಸಿಕೊಡಬೇಕೆಂದು ಕೊಂಡರು. ಆ ಪ್ರಯತ್ನದ ಫಲವೇ ಇದೀಗ 3.8 ಲಕ್ಷ ರೂಪಾಯಿ ವೆಚ್ಚದ ಮೂಲಭೂತ ಸೌಕರ್ಯವಿರುವ ಸುಸಜ್ಜಿತ ಮನೆ ನಿರ್ಮಾಣಗೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಜಿ ಸಚಿವ ಬಿ. ರಮಾನಾಥ ರೈ, ಲಯನ್ಸ್ ಕ್ಲಬ್ ಸೇರಿದಂತೆ ದಾನುಗಳು ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಉಳಿದ ಮೊತ್ತವನ್ನು ದೇವಪ್ಪ ಕುಲಾಲ್ ಭರಿಸಿದ್ದಾರೆ. ಇದೀಗ ವಿದ್ಯುತ್ ವ್ಯವಸ್ಥೆಯೂ ಒದಗಿದೆ. ಮೇ ತಿಂಗಳಿನಲ್ಲಿ ಮನೆಯ ಗ್ರಹಪ್ರವೇಶ ನಡೆಯಲಿದೆ.

ಚಿಮಿಣಿ ಬೆಳಕಿನಲ್ಲಿ ಬೆಳಗಿದ ಪ್ರತಿಭೆ:
ಸೋಮಶೇಖರ್ ಸುಶೀಲ ದಂಪತಿಯ ಪುತ್ರ ಗಣೇಶ್ ಗೆ ತನ್ನ ವಿದ್ಯಾಭ್ಯಾಸವನ್ನು ಪೂರೈಸಲು ಬಡತನ ಎಂದಿಗೂ ಅಡ್ಡಿಯಾಗಿರಲಿಲ್ಲ. ಶಾಲೆಯ ರಜೆಯಲ್ಲಿ ಮೋಹನ್ ಎಂಬವರ ಹೋಟೇಲ್ ನಲ್ಲಿ ದುಡಿದು ಹಣ ಸಂಪಾದಿಸಿ ಶಾಲೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದ. ಮನೆಗೆ ವಿದ್ಯುತ್ ಬೆಳಕಿನ ಕೊರತೆಯಿದ್ದರೂ ಚಿಮಿಣಿ ಬೆಳಕಿನಲ್ಲಿ ಓದಿ ಎಸ್ ಎಸ್ ಎಲ್ ಸಿ ಹಾಗೂ ಪಿಯೂಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಈತನ ವಿದ್ಯಾಭ್ಯಾಸಕ್ಕೆ ಲಯನ್ಸ್ ಸಂಸ್ಥೆ ಆರ್ಥಿಕ ಸಹಕಾರ ನೀಡಿದೆ. ಪ್ರಸ್ತುತ ಎಜೆ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಾಲೇಜಿನ ರಜೆಯಲ್ಲಿ ಅದೇ ಹೋಟೇಲ್ ನಲ್ಲಿ ದುಡಿಯುತ್ತಾನೆ. ಆತನ ಸಾಧನೆ ಹಾಗೂ ಪರಿಶ್ರಮ ಊರಿನ ದಾನಿಗಳಿಂದ ಮನೆ ನಿರ್ಮಿಸಿಕೊಡುವಂತೆ ಮಾಡಿದೆ. ದೇವಪ್ಪ ಕುಲಾಲ್ ಅವರ ಮಾದರಿ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
…..
ಬಾಲಕನ ಎಸ್ ಎಸ್ ಎಲ್ ಸಿ ಸಾಧನೆಯನ್ನು ಗಮನಿಸಿ ಅವರ ಮನೆಗೆ ಭೇಟಿ ನೀಡಿದಾಗ ಅವರ ಮನೆಯ ಸ್ಥಿತಿ ಗತಿ ಅರಿವಿಗೆ ಬಂದು ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಸಹಿತ ಕೆಲವು ದಾನಿಗಳು ಸಹಕಾರ ನೀಡಿದ್ದಾರೆ. ಬಡತನದಲ್ಲೂ ಗಣೇಶ್ ಶೈಕ್ಷಣಿಕ ಸಾಧನೆ ಅವನ ಮನೆ ನಿರ್ಮಾಣಕ್ಕೆ ನನಗೆ ಪ್ರೇರಣೆಯಾಗಿದೆ- ದೇವಪ್ಪ ಕುಲಾಲ್ ಪಂಜಿಕಲ್ಲು ಮನೆ ನಿರ್ಮಾಣದ ರುವಾರಿ
Advertisement







