
ಬಂಟ್ವಾಳ: ಝೀ ನ್ಯೂಸ್ ಕನ್ನಡ ಸುದ್ದಿ ವಾಹಿನಿಯಿಂದ ಕೊಡಮಾಡುವ ರಾಜ್ಯಮಟ್ಟದ ಕರ್ನಾಟಕ ಐಡಲ್ 2026 ಪ್ರಶಸ್ತಿ ಪಡೆದಿರುವ ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ನಿಕಟಪೂರ್ವ ಕಾರ್ಯದರ್ಶಿ ಸದಾನಂದ ಎಸ್ ಬಂಗೇರ ಅವರಿಗೆ ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ ಇದರ ಬಂಟ್ವಾಳ ವಲಯದ ವತಿಯಿಂದ ಅಭಿನಂದನಾ ಸಮಾರಂಭ ಬಂಟ್ವಾಳ ಬೈಪಾಸ್ ನಲ್ಲಿರುವ ಪ್ರೀತೇಶ್ ಸಭಾಂಗಣದಲ್ಲಿ ನಡೆಯಿತು.
ರೋಟರಿ 3181 ಜಿಲ್ಲಾ ಗವರ್ನರ್, ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಪ್ರಥಮ ಅಧ್ಯಕ್ಷ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಯಾಟರಿಂಗ್ ಸುಲಭದ ಕೆಲಸವಲ್ಲ. ಕ್ಯಾಟರಿಂಗ್ ಮಾಲಕರು ಎದುರಿಸುವ ಸಮಸ್ಯೆಗಳು ಹಲವಿದೆ. ಅಂತಹ ಉದ್ಯೋಗದಲ್ಲಿ ಇದ್ದು ಕೊಂಡು ಸಾಮಾನ್ಯ ಮನುಷ್ಯನೋರ್ವ ಅಸಾಮಾನ್ಯ ಕಾರ್ಯ ಮಾಡುವುದೇ ನಿಜವಾದ ಸಾಧನೆ. ಸದಾನಂದ ಬಂಗೇರ ಅವರು ಆ ಸಾಧನೆ ಮಾಡಿದ್ದಾರೆ. ಈ ಮೂಲಕ ನಮ್ಮ ವೃತ್ತಿಗೆ ಗೌರವ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ವ್ಯಕ್ತಿಗೂ
ಮನೆಯವರ ಸಹಕಾರ ಸಿಕ್ಕಿದಾಗ ಸಾಧನೆ ಮಾಡಲು ಸಾಧ್ಯವಿದೆ. ಸದಸ್ಯನೋರ್ವನ ಸಾಧನೆಯನ್ನು ಗೌರವಿಸಿ ಅಭಿನಂದನೆ ಮಾಡಿರುವುದು ಸಂಘದ ದೊಡ್ಡತನ. ಇಂತಹ ಪ್ರೀತಿ, ಒಗ್ಗಟ್ಟು ನಮ್ಮಲ್ಲಿ ಸದಾ ಇರಲಿ ಎಂದು ಆಶಿಸಿದರು.

ಸಂಘದ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಅವಧಿಯಲ್ಲಿ ಸದಾನಂದ ಬಂಗೇರ ಸಂಘದ ಕಾರ್ಯದರ್ಶಿಯಾಗಿದ್ದಾಗ ಆರ್ಥಿಕ ಕ್ರೋಡೀಕರಣಕ್ಕೆ ವಿಶೇಷವಾಗಿ ಸಹಕರಿಸಿದ್ದು ಇದರಿಂದ ಸಂಘಕ್ಕೆ ತುಂಬಾ ಪ್ರಯೋಜನವಾಗಿದೆ ಎಂದು ತಿಳಿಸಿದರು.
ನಿಕಟಪೂರ್ವಾಧ್ಯಕ್ಷ ವಲೇರಿಯನ್ ಲೋಬೋ ,, ಮಾತನಾಡಿ ಸದಾನಂದ ಬಂಗೇರ ಅವರ ಸೇವಾ ಕಾರ್ಯಗಳಿಗೆ ಸಂಘ ಸದಾ ಬೆನ್ನೆಲುಬಾಗಿ ನಿಂತಿರುತ್ತದೆ ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸದಾನಂದ ಬಂಗೇರ ಪ್ರಶಸ್ತಿಗಾಗಿ ಯಾವ ಸೇವಾ ಕಾರ್ರ್ಯವನ್ನು ಮಾಡಿಲ್ಲ. ಸೇವಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ಅರಸಿ ಬಂದಿರುವುದು ಖುಷಿ ನೀಡಿದೆ. ಎಲ್ಲರ ಪ್ರೀತಿ, ವಿಶ್ವಾಸ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು. ಕೋಶಾಧಿಕಾರಿ ಜೈಸನ್ ಸಿಕ್ವೇರಾ ವೇದಿಕೆಯಲ್ಲಿದ್ದರು.

ಸಂಘದ ಬಂಟ್ವಾಳ ವಲಯದ ಕಾರ್ಯದರ್ಶಿ ನವೀನ್ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಆಂಟನಿ ಸಿಕ್ವೇರಾ ವಂದಿಸಿದರು. ಬಂಟ್ವಾಳ ವಲಯದ ಸ್ಥಾಪಕ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಹಾಗೂ ಸದಸ್ಯ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Advertisement







