
ಬಂಟ್ವಾಳ : ಇಲ್ಲಿನ ಎಲ್ಲೈಸಿ ಶಾಖೆಯ ಹಿರಿಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ವಿಮಾ ಪ್ರತಿನಿಧಿಗಳ ತಂಡದ ಬೆಳ್ಳಿಹಬ್ಬ ಕಾರ್ಯಕ್ರಮ “ಕನಸು” ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಮೆರವಣಿಗೆ:
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಕಾರ್ಯಕ್ರಮ ನಡೆಯುವ ಸಭಾಂಗಣದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಗೊಂಬೆ ಕುಣಿತ, ಬಣ್ಣದ ಕೊಡೆ, ಸಮವಸ್ತ್ತ ಧರಿಸಿದ ಪ್ರತಿನಿಧಿಗಳು ಮೆರವಣಿಗೆಗೆ ಮೆರುಗು ನೀಡಿತು. ನೃತ್ಯದ ಮೂಲಕ ಅತಿಥಿಗಳನ್ನು ಸಭಾಂಗಣ ಕ್ಕೆ ಬರಮಾಡಿಕೊಳ್ಳಲಾಯಿತು.

ಸಭಾ ಕಾರ್ಯಕ್ರಮ:
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಡಾ. ಗೀತಾ ಪ್ರಕಾಶ್ ಉದ್ಘಾಟಿಸಿದರು.
ಅವರು ಮಾತನಾಡಿ ಮಧ್ವರಾಜ್ ಅವರ ಕನಸು ನನಸಾಗಿದೆ. ಅವರ ಸಾಧನೆಯ ಹಿಂದಿನ ಶ್ರಮ ಎದ್ದು ಕಾಣುತ್ತಿದೆ. ಅವರ ತಂಡ ಉತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದರು.


ಉಡುಪಿ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಎನ್.ಭಟ್ ಮಾತನಾಡಿ ಅಭಿವೃದ್ಧಿ ಅಧಿಕಾರಿಯಾಗಿ ತಂಡ ಕಟ್ಟುವುದು ದೊಡ್ಡ ಕೆಲಸ. ಅದನ್ನು ಮಧ್ವರಾಜ್ ಕಲ್ಮಾಡಿ ಸಾಧಿಸಿದ್ದಾರೆ. ಸಾಧನೆಯ ಬಳಿಕದ ಸಂಭ್ರಮದಿಂದ ಸಿಗುವ ಸಂತೃಪ್ತಿ ಅವಿಸ್ಮರಣೀಯ ವಾಗಿರುತ್ತದೆ ಎಂದರು.
ಬಂಟ್ವಾಳ ಹಿರಿಯ ಶಾಖಾಧಿಕಾರಿ ಗುರುದತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಈ ಸಂದರ್ಭ ಎಸ್ ಎಸ್ ಎಲ್ ಸಿ ಹಾಗೂ ಪಿಯೂಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪ್ರತಿನಿಧಿಗಳ ಮಕ್ಕಳನ್ನು ಅಭಿನಂದಿಸಲಾಯಿತು. ಸಾಧಕ ಪ್ರತಿನಿಧಿಗಳನ್ನು, ಶತಕವೀರ ಪ್ರತಿನಿಧಿಗಳು, ಹಾಗೂ ಹಿರಿಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಮಧ್ವರಾಜ್ ಕಲ್ಮಾಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಎಲೈಸಿಯ ಹಿರಿಯ ಅಧಿಕಾರಿ ದುರ್ಗಾರಾಮ್ ಶೆಣೈ, ಉಪ ಶಾಖಾಧಿಕಾರಿ ಮುತ್ತಯ್ಯ ಮರಾಠಿ ಶುಭ ಹಾರೈಸಿದರು.


ಹಿರಿಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಪ್ರಾಸ್ತವಿಕವಾಗಿ ಮಾತನಾಡಿ ಇಂದು ಕನಸು ನನಸಾಗಿರುವುದು ಹೆಮ್ಮೆಯ ಸಂಗತಿ. ವೃತ್ತಿಯನ್ನು ಪ್ರೀತಿಸಿದ ಕಾರಣ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.ಪ್ರಧಾನ ಸಂಚಾಲಕ ಲೂಯಿಸ್ ಮಸ್ಕರೇನಸ್ ಸ್ವಾಗತಿಸಿದರು. ಮಹಿಳಾ ಸಂಚಾಲಕಿ ಪ್ರೀತಿ ಹೆಗ್ಡೆ ವಂದಿಸಿದರು.ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಡೇಶ್ವಾಲ್ಯ ಶ್ರೀ ಚಿಂತಾಮಣಿ ತಂಡದಿಂದ ನೃತ್ಯ ಪ್ರದರ್ಶನ ಮತ್ತು ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಹಾಸ್ಯ ಪ್ರದರ್ಶನ ನಡೆಯಿತು.
Advertisement







