
ಬಂಟ್ವಾಳ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರು ಕೊಡಮಾಡುವ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ – 2026 ಪ್ರಶಸ್ತಿಗೆ
ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಇದರ ನೃತ್ಯಗುರು ಮತ್ತು ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ. ಬಿ.ಸಿ.ರೋಡ್ ಇದರ ಅಧ್ಯಕ್ಷೆ ವಿದುಷಿ ರೋಹಿಣಿ ಉದಯ್ ಆಯ್ಕೆಯಾಗಿರುತ್ತಾರೆ. ಭರತನಾಟ್ಯ ಕ್ಷೇತ್ರದ ಸಾಧನೆ ಹಾಗೂ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ಮೇ 23, 2026 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುವುದು ಎಂದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಾಟ್ಯ ಕ್ಷೇತ್ರದ ಅಪ್ರತಿಮ ಸಾಧಕಿ:
ವಿದುಷಿ ಶ್ರೀಮತಿ ರೋಹಿಣಿ ಉದಯ್ ಇವರು ಕಳೆದ 22 ವರ್ಷಗಳಿಂದ ಭರತ ನೃತ್ಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕಡೆಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿದ್ದು ( ಪುತ್ತೂರು, ಪುರುಷರಕಟ್ಟೆ, ಬಿ ಸಿ ರೋಡ್, ಬಂಟ್ವಾಳ, ಪಾಣೆಮಂಗಳೂರು, ಕನ್ಯಾನ ) ಗ್ರಾಮೀಣ ಪ್ರದೇಶ ಮತ್ತು ಗಡಿನಾಡ ಪ್ರದೇಶಗಳಾದ ಕಕ್ಯಪದವು ಮತ್ತು ಕನ್ಯಾನ ಗಳಲ್ಲಿ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಕೂಡ ನೀಡುತ್ತಿದ್ದಾರೆ. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ (ರಿ) ಪುತ್ತೂರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ 19 ವರ್ಷಗಳಿಂದ ಈ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ನೃತ್ಯ ಕಲಾವಿದರನ್ನು ಕರೆಸಿ ನೃತ್ಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಾರ್ಯಗಾರಗಳನ್ನು, ಪ್ರಾತ್ಯಕ್ಷಿಕೆಗಳನ್ನು, ನೃತ್ಯ ಪ್ರದರ್ಶನಗಳನ್ನು ಮಾಡುತ್ತಾ ಬಂದಿರುತ್ತಾರೆ. ಪ್ರತಿ ವರ್ಷ ಸಂಸ್ಥೆಯ ಮೂಲಕ “ನೃತ್ಯಧಾರ” ಎಂಬ ಕಾರ್ಯಕ್ರಮ ಮಾಡುತ್ತಿದ್ದು ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಗೆ ವೇದಿಕೆಯನ್ನು ಒದಗಿಸುತ್ತಿದ್ದಾರೆ.. ಕಳೆದ 4 ವರ್ಷಗಳಿಂದ ಯಕ್ಷಗಾನರಂಗದ ಮೇರು ಹಾಸ್ಯ ಕಲಾವಿದ ಕೀರ್ತಿಶೇಷ ರಸಿಕರತ್ನ ನಯನಕುಮಾರ್ ರವರ ಹೆಸರಿನಲ್ಲಿ ಕಲಾ ಸಾಧಕರಿಗೆ “ಕಲಾನಯನ” ಪ್ರಶಸ್ತಿಯನ್ನು ನೀಡುತ್ತಿದ್ದಾರೆ. “ನೃತ್ಯರಂಜನಿ” ಎಂಬ ತಿಂಗಳ ನೃತ್ಯಸರಣಿ ಕಾರ್ಯಕ್ರಮವನ್ನು ಮಾಡುತ್ತಿದ್ದು ಇಲ್ಲಿ ನೃತ್ಯ ಮಾಡುವ ವಿದ್ಯಾರ್ಥಿಗಳಿಗೆ ವೇದಿಕೆ, ಸಭಾಂಗಣ, ಧ್ವನಿ ಮತ್ತು ಬೆಳಕು ಇವುಗಳನ್ನು ಉಚಿತವಾಗಿ ಒದಗಿಸಿ ಅವರ ಕಲಾ ಪ್ರೌಢಿಮೆಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಪ್ರಸ್ತುತ ಡೈಜಿವರ್ಲ್ಡ್ ವಾಹಿನಿಯಲ್ಲಿ ನಡೆಯುತ್ತಿರುವ ಕರ್ನಾಟಕದ ಪ್ರಪ್ರಥಮ ಭರತನಾಟ್ಯ ರಿಯಾಲಿಟಿ ಶೋ “ನಟನಂ” ಇದರ ತೀರ್ಪುಗಾರರಾಗಿರುತ್ತಾರೆ.


ಸಾಮಾಜಿಕ ಸೇವೆ:
ವೃಕ್ಷ ಅಭಿಯಾನ ಎಂಬ ಶೀರ್ಷಿಕೆಯಡಿ ಪ್ರತೀ ವರ್ಷ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಸಂಸ್ಥೆಯ 11ನೇ ವರ್ಷದ ಕಾರ್ಯಕ್ರಮಕ್ಕೆ ನಾಡೋಜ ಪದ್ಮಶ್ರೀ ಡಾ. ಸಾಲುಮರದ ತಿಮ್ಮಕ್ಕನವರು ಆಗಮಿಸಿ ಗಿಡನೆಟ್ಟು ಆಶೀರ್ವದಿಸಿರುತ್ತಾರೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ. ಎಂಬ ಸಹಕಾರಿ ಸಂಘವನ್ನು ಹುಟ್ಟು ಹಾಕಿ ಇದರ ಅಧ್ಯಕ್ಷರಾಗಿ ಚುನಾಯಿತರಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ
ಕೊರೋನಾ ಸಂದರ್ಭದಲ್ಲಿ ಶಾಸಕರ ವಾರ್ ರೂಂಗೆ ನೆರವು ನೀಡಿದ್ದಾರೆ. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ತಂಡದ ಮೂಲಕ ಜಿಲ್ಲೆ, ರಾಜ್ಯ ಹಾಗು ಹೊರ ರಾಜ್ಯಗಳಲ್ಲೂ ಸುಮಾರು 1ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮಾನವ ಹಕ್ಕುಗಳ ಆಯೋಗದಿಂದ “ಹೆಚ್.ಆರ್.ಸಿ ಪ್ರಶಸ್ತಿ.” ಸುಮಸೌರಭ ಪತ್ರಿಕೆಯವರು ಕೊಡಲ್ಪಡುವ “ಸುಮಸೌರಭ ರತ್ನ” ಪ್ರಶಸ್ತಿಯನ್ನು ಪಡೆದಿದ್ದಲ್ಲದೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ನೃತ್ಯ ಕ್ಷೇತ್ರದ ಗಣನೀಯ ಸೇವೆಗೆ ಸನ್ಮಾನಿಸಿ ಅಭಿನಂದಿಸಿದೆ.

Advertisement







