
ಬಂಟ್ವಾಳ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಸಮಿಯ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಎನ್. ಪ್ರಕಾಶ್ ಕಾರಂತ್ ನರಿಕೊಂಬು ಇವರಿಂದ ಕೂಟಬಂಧು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಹಿರಿಯರಾದ ವೇದಮೂರ್ತಿ ವೆಂಕಪ್ಪಯ್ಯ ಭಟ್ ಕರ್ಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಭಾಗವಹಿಸಿ ಮಾತನಾಡಿ ಸಾಲಿಗ್ರಾಮ ದೇವಸ್ಥಾನ ಹಾಗೂ ತನಗೂ ಇದ್ದ ಭಕ್ತಿ ಸಂಬಂಧದ ಬಗ್ಗೆ ವಿಚಾರಗಳನ್ನು ತೆರೆದಿಟ್ಟರು. ಶ್ರೀ ಗುರುನರಸಿಂಹ ದೇವರ ಅನುಗ್ರಹದಿಂದ ತಾನು ಈ ಹಂತಕ್ಕೆ ಬೆಳೆದಿರುವುದಾಗಿ ತಿಳಿಸಿದ ಅವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಕಾಶ್ ಕಾರಂತ್ ಅವರಿಗೆ ಶುಭ ಹಾರೈಸಿದರು. ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಸ್ಥಾನಕ್ಕೆ ಪ್ರಕಾಶ್ ಕಾರಂತ್ ಅರ್ಹ ವ್ಯಕ್ತಿ. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಆ ಕಾರಣಕ್ಕಾಗಿ ಅವರು ಗೆದ್ದಿದ್ದಾರೆ. ಮುಂದೆ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ ಎಂದು ಶುಭ ಕೋರಿದರು.
ಗೋಪಾಲಕೃಷ್ಣ ಹೇರಳೆ ಮಾತನಾಡಿದರು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಧರ್ಮದರ್ಶಿ ಪ್ರಕಾಶ್ ಕಾರಂತ್ ಮಾತನಾಡಿ
ಎಲ್ಲರ ಪರಿಶ್ರಮ, ಕಾಳಜಿ ಹಾಗೂ ಶ್ರೀ ಗುರು ನರಸಿಂಹ ದೇವರ ಕೃಪೆಯಿಂದಾಗಿ ಈ ಅವಕಾಶ ಒದಗಿ ಬಂದಿದೆ.ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯೋಗ್ಯವಾದ ಆಡಳಿತ ತರುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ರಘುನಾಥ ಸೋಮಯಾಜಿ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಕಾಶ್ ಕಾರಂತ್ ಅವರ ಗೆಲುವಿಗೆ ಸಹಕರಿಸಿದ 80ಕ್ಕಿಂತಲೂ ಅಧಿಕ ಮಂದಿ ಕೂಟ ಬಂಧುಗಳನ್ನು ಶಾಲು, ಹೂ ನೀಡಿ ಗೌರವಿಸಲಾಯಿತು.

ದೇವಸ್ಥಾನದ ನೂತನ ಕೋಶಾಧಿಕಾರಿ ಲಕ್ಷ್ಮೀ ನಾರಾಯಣ ಹೊಳ್ಳ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ
ಶ್ರೀಧರ್ ಹೊಳ್ಳ, ರಮೇಶ್ ಹೊಳ್ಳ, ವಾಸುದೇವ ಸೋಮಯಾಜಿ, ರಮಾನಂದ ನೂಜಿಪ್ಪಾಡಿ, ಗಿರಿಧರ್ ರಾವ್, ಯಮುನಾ ಐಗಳ್, ವಿನಯ್ ಕಾರಂತ್, ಸೋಮಶೇಖರ ಮಯ್ಯ, ಸದಾಶಿವ ಹೊಳ್ಳ, ಕೃಷ್ಣರಾಜ ಭಟ್
ವೇದಾನಂದ ಕಾರಂತ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಬಂಟ್ವಾಳ ಅಂಗಸಂಸ್ಥೆ ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಸ್ವಾಗತಿಸಿ, ಸುರೇಶ್ ಹೊಳ್ಳ ಕಳ್ಳಿಮಾರ್ ವಂದಿಸಿದರು,
ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Advertisement







