
ಬಂಟ್ವಾಳ: ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ನಾಟಿ ನಿವಾಸಿ ರಕ್ಷಿತ್ ಶೆಟ್ಟಿ ಮೃತ ಬೈಕ್ ಸವಾರನಾಗಿದ್ದಾನೆ.
ಪಾಣೆಮಂಗಳೂರಿನಲ್ಲಿ ಎರಡು ಬೈಕ್ ಗಳ ಮಧ್ಯೆ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಕ್ಷಿತ್ ಶೆಟ್ಟಿಯವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆದರೆ ದೇಹ ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.
ಮೃತ ರಕ್ಷಿತ್ ಪಾಣೆಮಂಗಳೂರು ಬಳಿಯ ನಾಟಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ವಿಡಿಯೋಗ್ರಾಫರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಭಾನುವಾರ ಅವರ ಮಗಳ ಹುಟ್ಟುಹಬ್ಬವಿದ್ದು ಮನೆಮಂದಿ ಸಿದ್ದತೆ ನಡೆಸಿದ್ದರು. ಈ ನಡುವೆ ಈ ದುರ್ಘಟನೆ ಮನೆ ಮಂದಿಯನ್ನು ಕಂಗೆಡಿಸಿದೆ.
ಇವರ ಸಹೋದರ ರಂಜಿತ್ ಶೆಟ್ಟಿ ಕೆಲ ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸೊಂಟದ ಕೆಳಭಾಗ ಬಲಹೀನರಾಗಿ ಹಲವು ಸಮಯದಿಂದ ಹಾಸಿಗೆ ಹಿಡಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಮನೆಮಂದಿಯ ಸಂಪೂರ್ಣ ಜವಾಬ್ದಾರಿಯನ್ನು ರಕ್ಷಿತ್ ಶೆಟ್ಟಿ ಅವರು ವಹಿಸಿಕೊಂಡಿದ್ದು ಸಂಕಷ್ಟದಲ್ಲಿದ್ದ ಈ ಬಡ ಕುಟುಂಬಕ್ಕೆ ಬರಸಿಡಿಲೆರಗಿದಂತಾಗಿದೆ.


Advertisement







