
ಬಂಟ್ವಾಳ: ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಿಂದ ಪೊಸಳ್ಳಿ, ದೈಪಲ, ಕಾಮಾಜೆ, ಕುಲಾಲರ ಮಠ ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣ ಕಾರ್ಯಕ್ರಮ ಅವರ 104 ನೇ ಜನ್ಮದಿನದ ಅಂಗವಾಗಿ ಸೋಮವಾರ ನಡೆದಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಾಮಫಲಕ ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು ರಸ್ತೆಗೆ ಬಾಳಪ್ಪರ ಹೆಸರು ಇಟ್ಟ ತಕ್ಷಣ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಬದಲಾಗಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಿ ಸುಂದರೀಕರಣಗೊಳಿಸಿದಾಗ ಮಾತ್ರ ನಾಮಕರಣ ಮಾಡಿರುವುದು ಅರ್ಥಪೂರ್ಣವಾಗುತ್ತದೆ. ತನ್ನ
ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ದಿಗೆ ಅನುದಾನ ಒದಗಿಸುವುದಾಗಿ ತಿಳಿಸಿದ ರಾಜೇಶ್ ನಾಯ್ಕ್ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಂದರಗೊಳಿಸುವಂತೆ ತಿಳಿಸಿದರು.
ಬಿಎಸ್ ಎಫ್ ನಿವೃತ್ತ ಕಮಾಂಡರ್ ಚಂದಪ್ಪ ಮೂಲ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಮ್ಮೆಂಬಳ ಬಾಳಪ್ಪ ಅವರ ಹೆಸರು ಚಿರಸ್ಥಾಯಗೊಳಿಸುವ ನಿಟ್ಟಿನಲ್ಲಿ ಶಾಶ್ವತವಾದ ಕೆಲಸ ಆಗಬೇಕಿದ್ದು ಪ್ರಸ್ತುತ ದಿನಗಳಲ್ಲಿ ಹಂತಹಂತವಾಗಿ ನಡೆಯುತ್ತಿದೆ. ಬಾಳಪ್ಪ ಹೆಸರು ಅಜರಾಮರಾಮವಾಗಿ ಉಳಿಯಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಬೂಡ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಸ್ವಾಗತಿಸಿದರು, ಸದಸ್ಯ ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು, ಕಟ್ಟಡ ಸಮಿತಿ ಗೌರವಾಧ್ಯಕ್ಷ ನಾರಾಯಣ ಸಿ.ಪೆರ್ನೆ ಕಾರ್ಯಕ್ರಮ ನಿರೂಪಿಸಿದರು.
ಬೂಡಾ ಸದಸ್ಯ ಮನೋಹರ ನೇರಂಬೋಳು,
ಕಟ್ಟಡ ಸಮಿತಿ ಜತೆಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲು, ಸಿವಿಲ್ ಇಂಜಿನಿಯರ್ ಸತೀಶ್ ಕುಲಾಲ್, ಸ್ಥಳೀಯರಾದ ಜನಾರ್ಧನ ಪೊಸಳ್ಳಿ ಕಾರ್ಯಕ್ರಮಕ್ಕೆ ಸಹಕರಿಸಿದರು.

Advertisement







