
ಬಂಟ್ವಾಳ: ರಾಜಕೀಯ ರಹಿತವಾದ ಸಹಕಾರಿ ಕ್ಷೇತ್ರ ದ.ಕ.ದಲ್ಲಿದೆ. ರಾಜಕೀಯ ರಹಿತವಾಗಿ ಜನರ ಸೇವೆ ಮಾಡಲು ಸಹಕಾರಿ ಕ್ಷೇತ್ರದಲ್ಲಿ ಸಾಧ್ಯವಿದ್ದು ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣವೆಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ . ರಾಜೇಂದ್ರ ಕುಮಾರ್ ಹೇಳಿದರು.
ಸಹಕಾರ ರತ್ನ ಟಿ.ಬಿ. ರಾಜರಾಂ ಭಟ್ ಅಭಿನಂದನಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಶನಿವಾರ ನಡೆದ ಟಿ.ಬಿ. ರಾಜರಾಮ ಭಟ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಕ್ಷಾತೀತವಾಗಿ ಸಹಕಾರಿ ರತ್ನ ಪ್ರಶಸ್ತಿ ನೀಡಿದರೆ ಅದಕ್ಕೆ ಬೆಲೆ ಬರುತ್ತದೆ. ಈ ಭಾರಿ 10 ಮಂದಿಗೆ ಜಿಲ್ಲೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಬಂದಿದೆ. ಇವರಿಗೆ ಎಲ್ಲಾ ಸಹಕಾರಿಗಳು ಗೌರವಿಸಿದಾಗ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ದ.ಕ. ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜನರಿಗೆ ರಕ್ತಗತವಾಗಿದೆ. ದೇಶಕ್ಕೆ 4 ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ನೀಡಿದ ಹೆಗ್ಗಳಿಕೆ ದ.ಕ.ಜಿಲ್ಲೆಗಿದೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸಹಕಾರಿ ಕ್ಷೇತ್ರದ ಮೂಲಕವೇ ತನ್ನ ರಾಜಕೀಯ ಜೀವನ ಆರಂಭಗೊಂಡಿರುವುದಾಗಿ ತಿಳಿಸಿದರು. ರಾಜರಾಂ ಭಟ್ ಸಹಕಾರಿ ಕ್ಷೇತ್ರಕ್ಕೆ ವಿಪೂಲವಾದ ಶಕ್ತಿಯನ್ನು ತುಂಬಿದ್ದಾರೆ ಎಂದು ತಿಳಿಸಿದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಟಿ.ಜಿ. ರಾಜರಾಂ ಭಟ್ ಹಾಗೂ ಜ್ಯೋತಿ ಆರ್. ಭಟ್ ದಂಪತಿಯನ್ನು ಅಭಿನಂದಿಸಲಾಯಿತು.ಬಳಿಕ ಎಸ್ ಸಿ ಡಿಸಿಸಿ ಬ್ಯಾಂಕಿನ 10 ಶಾಖೆಗಳ ವತಿಯಿಂದ ರಾಜರಾಂ ಭಟ್ ಅವರನ್ನು ಅಭಿನಂದಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ರಾಜರಾಂ ಭಟ್ ಅವರು ಮಾತನಾಡಿ ಸಹಕಾರಿ ಚಳುವಳಿಯಲ್ಲಿ ನನಗೆ ಬೆಂಬಲ ನೀಡಿದವರು ಎಂ.ಎನ್. ರಾಜೇಂದ್ರ ಕುಮಾರ್. ಅವರಿಂದ ಸ್ವೀಕರಿಸಿದ ಸನ್ಮಾನದ ಈ ದಿನ ನನ್ನ ಜೀವನದ ಉತೃಷ್ಟವಾದ ದಿನ .ಯುವ ಜನರು ಸಹಕಾರಿ ಸಂಘಕ್ಕೆ ಬರಲು ಇದು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾಮಧೇನು ನವೋದಯ ಸಸ್ವಸಹಾಯ ಸಂಘದ ಸದಸ್ಯೆ ಸುಜಾತ ಅವರಿಗೆ 25 ಸಾವಿರ ರೂಪಾಯಿಗಳ ಆರ್ಥಿಕ ನೆರವಿನ ಚೆಕ್ ನೀಡಲಾಯಿತು.

ಎಸ್ ಸಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಚ ಶಶಿಕುಮಾರ್ ರೈ ಬಾಲ್ಯೊಟ್ಟು, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ , ಎಸ್ ಸಿ ಡಿಸಿಸಿ ನಿರ್ದೇಶಕ ಎಸ್. ಪಿ.ಜಯರಾಂ ರೈ,
ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.
ಅಭಿನಂದನಾ ಸಮಿತಿ ಅಧ್ಯಕ್ಷ ಜಯಶಂಕರ್ ಬಾಸ್ರಿತ್ತಾಯ ಸ್ವಾಗತಿಸಿದರು. ಗೌರವಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿ, ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಮಹಾದೇವ ವಿವಿಧೋದ್ದೇಶ ಸಹಕಾರ ಸಂಘದ ಸಿಈಒ ಪುಷ್ಪರಾಜ್ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಅಜಯ್ ಕುಮಾರ್ ಅಜಿಲ ಸಹಕರಿಸಿದರು.
Advertisement







