
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.


ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ಜಯಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಾರತದಲ್ಲಿ ಸಾಂಕ್ರಮಿಕವಲ್ಲದ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಷಲು ಸಾಧ್ಯವಾದರೆ ರೋಗ ನಿರ್ಮಾಲನ ಮಾಡಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಇಂತಹ ಆರೋಗ್ಯ ಶಿಬಿರಗಳು ಅತ್ಯಂತ ಮಹತ್ವವಾಗಿದೆ ಎಂದರು. ರೋಗ ಬರುವ ಮೊದಲೇ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ತಿಳಿಸಿದರು.


ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣ ಸಿಕ್ಕಾಗ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ. ಇಂತಹ ಶಿಬರಗಳನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಜ್ಞಾ ಸಲಹಾ ಕೇಂದ್ರದ ಪ್ರಾಂಶುಪಾಲೆ ವಿಜಯ ಶುಭ ಹಾರೈಸಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದ ಜನರಿಗೂ ಆರೋಗ್ಯ ಸೇವೆ ಸಿಗಬೇಕೆನ್ನುವ ಸದುದ್ದೇಶದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.


ವೇದಿಕೆಯಲ್ಲಿ ಯೆನಪೋಯ ಆಸ್ಪತ್ರೆಯ ವೈದ್ಯ ಡಾ. ಮಹಮ್ಮದ್ ಸಿರಾಸ್, ರೋಟರಿ ವಲಯ ಸೇನಾನಿ ಸುರೇಶ್ ಸಾಲ್ಯಾನ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯದರ್ಶಿ ನಾಗೇಶ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ವಚನ್ ಶೆಟ್ಟಿ ಸ್ವಾಗತಿಸಿದರು, ಪ್ರಜ್ಞಾ ಸಲಹಾ ಕೇಂದ್ರದ ಸಂಯೋಜಕಿ ಮೇರಿ ಲಿಲ್ಲಿ ವಂದಿಸಿದರು. ರೋಟರಿ ಆನ್ಸ್ ಸದಸ್ಯೆ ಸಮತಾ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ಆನ್ಸ್ ಅಧ್ಯಕ್ಷೆ ರಶ್ಮಿ ಶೆಟ್ಟಿ ಹಾಗೂ ರೋಟರಿ ಸದಸ್ಯರು ಸಹಕರಿಸಿದರು.


ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್, ದಡ್ಡಲಕಾಡು, ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ (ರಿ.) ಬಂಟ್ವಾಳ ಕ್ಷೇತ್ರ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಬಂಟ್ವಾಳ ವಲಯ ಹಾಗೂ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದಡ್ಡಲಕಾಡು, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ದೇರಳಕಟ್ಟೆ ಶಿಬಿರಕ್ಕೆ ಸಹಯೋಗ ನೀಡಿದರು. ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.

Advertisement







