
ಬಂಟ್ವಾಳ: ಬಿ.ಕಸ್ಟ ಗ್ರಾಮದ ನೇರಂಬೋಳು ಶ್ರೀ ರಕೇಶ್ವರಿ ಯುವಕ ಸಂಘದ ರಜತ ಸಂಭ್ರಮ ಕಾರ್ಯಕ್ರಮ ಏ.5 ಮತ್ತು 6 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹರೀಶ ಕುಲಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಮನೋಹರ ನೇರಂಬೋಳು ಮಾತನಾಡಿ, ಈಗಾಗಲೇ 30ಕ್ಕೂ ಮಿಕ್ಕಿ ಮಂದಿ ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಯಕ್ಷಗಾನ ತರಬೇತಿ ನೀಡಲಾಗಿದ್ದು, ಪ್ರತಿವರ್ಷ ಓರ್ವ ವಿದ್ಯಾರ್ಥಿಯನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ರಜತ ಮಹೋತ್ಸವ ಪ್ರಯುಕ್ತ 5ಮತ್ತು 6ರಂದು ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ಯಕ್ಷಗಾನ ಹಾಗೂ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಶೋಧರ ಪೂಜಾರಿ, ರವೀಂದ್ರ ಕುಲಾಲ್, ಹರಿಶ್ಚಂದ್ರ ಪೂಜಾರಿ, ಪದ್ಮನಾಭ ಪೂಜಾರಿ, ಗಣೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
Advertisement







