ಬಂಟ್ವಾಳ: ತಾಲೂಕಿನ ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ 12 ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ” ವು ಮಾ.4 ರಂದು ವೈಭವಯುತವಾಗಿ ನಡೆಯಲಿದೆ ಎಂದು ಮಾಜಿ ಸಚಿವ, ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳದ ಯಶಸ್ವಿಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದರು. ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದಗಳೊಂದಿಗೆ” ಬಂಟ್ವಾಳ ಕಂಬಳ” ಎಂಬ ಹೆಸರಿನಲ್ಲಿ ನಡೆಸಲಾಗುತ್ತಿದ್ದು, ಕಳೆದ ವರ್ಷ ಕಂಬಳ ಸೀಸನ್ ನ ಬಳಿಕವು ಕೋಣದ ಮಾಲೀಕರ ಸಹಕಾರದಿಂದ ಜಿಲ್ಲಾ ಕಂಬಳ ಸಮಿತಿ ವಿಶೇಷವಾದ ಅವಕಾಶ ಕಲ್ಪಿಸಿಕೊಟ್ಟಿದ್ದು,ಮಳೆಯಿಂದಾಗಿ ಒಂದಷ್ಟು ಸಮಸ್ಯೆ ಯಾಗಿತ್ತು.ಈ ಬಾರಿ ಮಾರ್ಚ್ ತಿಂಗಳಲ್ಲೇ ಕಂಬಳ ಸಮಿತಿ ಅನುವು ಮಾಡಿಕೊಟ್ಟ ಹಿನ್ನಲೆಯಲ್ಲಿ ವ್ಯವಸ್ಥಿತವಾಗಿ ಕಂಬಳವನ್ನು ನಡೆಸಲುದ್ದೇಶಿಸಲಾಗಿದೆ ಎಂದು ಹೇಳಿದರು.
ಕಂಬಳದ ಯಶಸ್ವಿಗಾಗಿ ಮೂಡೂರು-ಪಡೂರು ಕಂಬಳ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಕಳೆದ ಬಾರಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ಜೋಡುಕರೆಗಳನ್ನು ಸರಿಪಡಿಸುವ ಕೆಲಸ ಭರದಿಂದ ಸಾಗುತ್ತಿದೆ. ಸಮಿತಿಯ ಕೋರಿಕೆಯಂತೆ ಮಾರ್ಚ್ ತಿಂಗಳಲಿನಲ್ಲಿ ಕಂಬಳ ನಡೆಸಲು ಅವಕಾಶ ನೀಡಿದ್ದು, ಅದಕ್ಕಾಗಿ ಸಮಿತಿಗೆ ಅಭಿನಂದನೆ ಸಲ್ಲಿಸಿದರು. ಈ ಬಾರಿ ಕಂಬಳವನ್ನು ಅದ್ದೂರಿಯಾಗಿ ನಡೆಸಲುದ್ದೇಶಿಸಿದ್ದು,ವಿಶೇಷವಾಗಿ ಚಲನಚಿತ್ರ ನಟರು,ವಿವಿಧ ಕ್ಷೇತ್ರದ ಗಣ್ಯರು,ಉದ್ಯಮಿಗಳು ಕಂಬಳದಲ್ಲಿ ಭಾಗವಹಿಸಲಿದ್ದಾರೆ.
ನಾವೂರ ಗ್ರಾಮದ ಕೂಡಿಬೈಲಿನಗದ್ದೆಯ ಯಜಮಾನರು,ಗ್ರಾಮಸ್ಥರು ಕಂಬಳಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ.ಕಳೆದ ಸಾಲಿನಲ್ಲಾಗಿರುವ ಎಲ್ಲಾ ಲೋಪಗಳನ್ನು ಸರಿಪಡಿಸಲಾಗಿದೆ.ಸುಮಾರು 200 ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಹೇಳಿದರು.
ಸಮಿತಿ ಸಂಚಾಲಕ ಪದ್ಮಶೇಖರ್ ಜೈನ್,ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ,ಪದಾಧಿಕಾರಿಗಳಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಅಬ್ಬಾಸ್ ಆಲಿ, ರಾಜೀವ ಶೆಟ್ಟಿ ಎಡ್ತೂರು, ಎಂ.ಎಸ್.ಮಹಮ್ಮದ್, ಪದ್ಮನಾಭ ರೈ, ಅವಿಲ್ ಮೆನೇಜಸ್, ಸುಭಾಷ್ ಚಂದ್ರ ಶೆಟ್ಟಿ, ಉಮೇಶ್ ಕುಲಾಲ್, ದೇವಿಪ್ರಸಾದ್ ಪೂಂಜ, ಸದಾಶಿವ ಬಂಗೇರ, ನವಾಜ್ ಬಡಕಬೈಲು, ಶಬೀರ್ , ಜಗದೀಶ್ ಕೊಯಿಲ, ರಮೇಶ್ ನಾಯಕ್ ರಾಯಿ, ವಾಸು ಪೂಜಾರಿ, ಸಂಜಿತ್ ಪೂಜಾರಿ, ವೆಂಕಪ್ಪ ಪೂಜಾರಿ, ಸುರೇಶ್ ಜೊರಾ,ವೆಲೆರಿಯನ್ ಡೆ’ಸಾ,ಜಾನ್ ಸಿರಿಲ್ ಡಿಸೋಜ,ಬಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕಂಬಳದ ಕೋಣದ ಯಜಮಾನರಿಗೆ ಆಹ್ವಾನಿಸುವ ಅಮಂತ್ರಣಪತ್ರ ಬಿಡುಗಡೆಗೊಳಿಸಲಾಯಿತು.