ಬಂಟ್ವಾಳ: ಪ್ರತಿಯೊಂದು ಚರಾಚರ ವಸ್ತುವಿನಲ್ಲೂ ಜ್ಞಾನವಾಗಿ ದೇವರ ಅಸ್ಥಿತ್ವವಿದೆ. ದೇವರ ವಿರಾಟ್ ಸ್ವರೂಪವನ್ನು ಗ್ರಹಿಸುವ ಜ್ಞಾನ ನಮ್ಮಲ್ಲಿದ್ದಾಗ ದೇವರ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ, ದೇವರನ್ನು ನಾವು ಉಪಾಸನೆ ಮಾಡಿದಾಗ ನಾವು ವಿಜ್ಞಾನಿಗಳಾಗುತ್ತೇವೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು.
ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ನೂತನ ರಥ ಸಮರ್ಪಣೆ ಹಾಗೂ ಜಾತ್ರಾಮಹೋತ್ಸವದ ಪ್ರಯುಕ್ತ ನಡೆದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮುಗಿಯದಷ್ಟು ಸಂಶೋಧನೆ ಮಾಡಬಹುದಾದ ರಹಸ್ಯ ಈ ಭೂ ಮಂಡಲದಲ್ಲಿದೆ. ಪ್ರಕೃತಿಯೊಂದಿಗೆ ಈ ದೇಹವನ್ನು ಸಂಯೋಜಿಸಲಾಗಿದೆ. ಪಂಚಭೂತಗಳ ತತ್ವವು ನಮ್ಮ ದೇಹದಲ್ಲಿದೆ. ಸೃಷ್ಡಿಯನ್ನು ಸೃಷ್ಟಿಸಿದ ಚೈತನ್ಯ ನಮ್ಮ ದೇಹದಲ್ಲೂ ಇದೆ. ದೇವಸ್ಥಾನ ಪಂಚ ಪ್ರಾಕಾರಗಳಿಂದ ನಿರ್ಮಾಣವಾದರೆ ದೇಹವು ಪಂಚ ಕೋಶಗಳಿಂದ ರಚಿತವಾಗಿದೆ. ದೇಹ ಎನ್ನುವ ನಮ್ಮ ದೇವಸ್ಥಾನಕ್ಕೆ ತಂತ್ರಿಗಳು ನಾವೇ, ಅಲ್ಲಿಗೆ ಕಲಶಾಭಿಷೇಕ ಮಾಡ ಬೇಕಾದವರು ನಾವು. ಆದ್ದರಿಂದ ಉತ್ತಮವಾದ ಆಚಾರ ವಿಚಾರಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಲಕ್ಷ್ಮಣ್ ಗಟ್ಟಿಯವರ ಭಕ್ತಿ ಗೀತೆಗಳ ಹಾಡಿನ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಲಂದಿಲ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನಿಧ್ಯದ ಮನೋಜ್ ಕಟ್ಟೆಮಾರ್, ಉದ್ಯಮಿ ರಾಮ್ ರಾಜ್ ರಾವ್, ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ, ಫಾದರ್ ಮುಲ್ಲರ್ ಆಸ್ಪತ್ರೆಯ ಅಂಕೋಲಾಜಿ ವಿಭಾಗದ ಮುಖ್ಯಸ್ಥ ಡಾ. ರೋಹನ್ ಚಂದ್ರ ಆರ್. ಗಟ್ಟಿ, ಕೂಟತ್ತಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ. ಹರಿಕಿರಣ್ ಗಟ್ಟಿ ಕೂಟತ್ತಜೆ, ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿ ಅಧ್ಯಕ್ಷ ರಾಮದಾಸ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಮಿತಿಯ ಸಂಚಾಲಕ ಕೇಶವ ಮಾಸ್ತರ್ ಮಾರ್ನಬೈಲು ಸ್ವಾಗತಿಸಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿರಾಜ್ ರಾವ್ ನೂಯಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕರಾದ ಹೇಮಾ ಆರ್. ಮಯ್ಯ, ರಮೇಶ್ ಮಯ್ಯ, ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ವಿಶ್ವನಾಥ ಆಳ್ವ ಕಾಂತಾಡಿಗುತ್ತು ವಂದಿಸಿದರು.