
ಬಂಟ್ವಾಳ: ಬಿ.ಸಿ.ರೋಡಿನ ಬಸ್ಸು ನಿಲ್ದಾಣದಲ್ಲಿ ಹಂತಕನಿಂದ ಹತ್ಯೆಗೊಳಗಾಗ ಕಕ್ಕೆಪದವಿನ ಲಾವಣ್ಯ ಗೌಡ ಅವರ ಮನೆಗೆ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ. ಬಾಳ್ತಿಲ ಇದರ ಸಂಸ್ಥಾಪಕಿ, ನ್ಯಾಯವಾದಿ ಶೈಲಜಾ ರಾಜೇಶ್ ಹಾಗೂ ಸಂಸ್ಥೆಯ ಸದಸ್ಯರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು.
ಲಾವಣ್ಯ ಅವರ ತಂದೆ ಬಾಲಪ್ಪ ಗೌಡ ಹಾಗೂ ತಾಯಿ ರೂಪ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಅಗತ್ಯವಿದ್ದಲ್ಲಿ ಸಂಸ್ಥೆಯ ಮೂಲಕ ಕಾನೂನಿನ ನೆರವು ನೀಡಲು ಸಿದ್ಧರಿರುವುದಾಗಿ ತಿಳಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶೈಲಜಾ ರಾಜೇಶ್ ಮಾನವ ಹತ್ಯೆಯಂತಹ ಹೀನಾಯ ಕೃತ್ಯ ಮಾಡುವ ಆರೋಪಿ ಚೇತನ್ ನಂತವರಿಗೆ ಎನ್ ಕೌಂಟರ್ ನಂತಹ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕಾನೂನಿನಲ್ಲಿ ತಿದ್ದುಪಡಿ ತರುವ ಕೆಲಸ ಆಗಬೇಕು. ಪ್ರತಿಯೊಬ್ಬರಿಗೂ ಮುಕ್ತವಾಗಿ ಬದುಕುವ ಅವಕಾಶವನ್ನು ಕಾನೂನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಮಕ್ಕಳಿಗೆ ಸಂಸ್ಕಾರ ಕೊಡದೆ ಹೋದರೆ ಇಂತಹ ವಿಕೃತ ಮನಸ್ಸಿನ ಯುವಕರು ರೂಪುಗೊಳ್ಳುತ್ತಾರೆ. ಸಂಸ್ಕಾರ ಮನೆಯಿಂದ ಸಿಗಬೇಕು, ತಪ್ಪು ಮಾಡಿದರೆ ಶಿಕ್ಷೆ ಸಿಗುತ್ತದೆ ಎನ್ನುವ ಕಾನೂನಿನ ಭಯವೂ ಬೇಕು ಎಂದ ಅವರು ಲಾವಣ್ಯ ಅವರ ಅಗಲಿಕೆಯ ನೋವನ್ನು ನಿವಾರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ಕರುಣಿಸಲಿ ಎಂದು ಆಶಿಸಿದರು.

ಈ ಸಂದರ್ಧ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯರಾದ ಶಕುಂತಳ ಯೋಗೀಶ್, ಪುಷ್ಪಲತಾ, ಜೇನ್ ಮಾಡ್ತ, ಸುಲತಾ, ಇಂದಿರಾ , ಶ್ರೇಷ್ಠ ಉಪಸ್ಥಿತರಿದ್ದರು.
Advertisement







