

ಬಂಟ್ವಾಳ: ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದ ಬಳಿಕ, ಯುವ ಸಮುದಾಯ ಉದ್ಯೋಗ ಹರಸುತ್ತಾ ನಗರಗಳತ್ತ ಮುಖಮಾಡಿದ್ದು ತುಳುನಾಡಿನ ತರವಾಡು ಮನೆಗಳಲ್ಲಿ ಸೇರುವ ಕುಟುಂಬಿಕರ ಸಂಖ್ಯೆ ಕಡಿಮೆಯಾಗಿತ್ತು. ಬದಲಾವಣೆಯ ಕಾಲಘಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಕುಟುಂಬಿಕರು, ಯುವ ಸಮುದಾಯ ಮತ್ತೆ ತಮ್ಮ ತರವಾಡು ಮನೆಗಳತ್ತ ಆಗಮಿಸಿ, ಕುಟುಂಬದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಜೀಪಪಡು ಗ್ರಾಮದ ಕೋಟೆಕಣಿಯ ಮುಗ ಮನೆ ಅಂಚನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ನಡೆದ ಆಟಿಡೊಂಜಿ ಅಂಚನ್ ಕೂಟ ಕುಟುಂಬಿಕರಲ್ಲಿ ಸಂಭ್ರಮದ ವಾತವರಣವನ್ನು ಸೃಷ್ಟಿಸಿದೆ. ಮುಗ ಮನೆಯಲ್ಲಿ ದಿನವಿಡಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ, ಆಟೋಟಗಳಲ್ಲಿ ಕುಟುಂಬ ಸದಸ್ಯರು ಭಾಗವಹಿಸಿ ಸಂಭ್ರಮಿಸಿದರು.





ಬೆಳಿಗ್ಗೆ ಆಟಿಡೊಂಜಿ ಅಂಚನ್ ಕೂಟವನ್ನು ಕುಟುಂಬದ ಹಿರಿಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಗಮನೆ ಅಂಚನ್ ಕುಟುಂಬಸ್ಥರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿ ಕುಟುಂಬದಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಹಿರಿಯರು, ಕಿರಿಯರ ನಡುವಿನ ಸಂಬಂಧ ಬಾಂಧವ್ಯ ವೃದ್ಧಿಯಾಗಲಿದೆ, ಈ ಪರಿಕಲ್ಪನೆಯನ್ನು ಉಳಿಸಿ ಬೆಳಿಸುವ ಕಾರ್ಯ ಆಗಬೇಕು ಎಂದರು.ಬಳಿಕ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಮನೋರಂಜನಾ ಆಟೋಟಗಳು ನಡೆಯಿತು. ಮಧ್ಯಾಹ್ನ ಕುಟುಂಬಿಕರೇ ಮನೆಯಲ್ಲಿ ತಯಾರಿಸಿ ತಂದ 27 ಬಗೆಯ ಆಟಿ ತಿಂಗಳ ಖಾದ್ಯದೊಂದಿಗೆ ಸಹಭೋಜನ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ 14 ಮಂದಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.



ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ಪ್ರವೀಣ್ ಅಂಚನ್ ಟ್ರಸ್ಟಿ್ಗಳಾದ ಹರೀಶ್ ಅಂಚನ್, ದಿನೇಶ್ ಅಂಚನ್, ಪುರುಷೋತ್ತಮ ಅಂಚನ್ ದೇರಳಕಟ್ಟೆ, ಉಮೇಶ್ ಅಂಚನ್, ನವೀನ್ ಅಂಚನ್, ಜಯಂತ್ ಅಂಚನ್, ಶೇಖರ್ ಅಂಚನ್ ಶೀನ ಪೂಜಾರಿ, ಸುಕುಮಾರ್ ಅಂಚನ್ ಉಪಸ್ಥಿತರಿದ್ದರು. ಪುರುಷೋತ್ತಮ ಅಂಚನ್ ಪಂಜಿಕಲ್ಲು ಕಾರ್ಯಕ್ರಮ ನಿರೂಪಿಸಿ ಆಟೋಟಗಳನ್ನು ನಡೆಸಿಕೊಟ್ಟರು.
Advertisement







