
ಬಂಟ್ವಾಳ: ವೈದ್ಯರ ಸಲಹೆ, ಪೋಷಕಾಂಶಯುಕ್ತ ಆಹಾರ ಸೇವನೆ, ಮನೆಯ ಪರಿಸರ ಸ್ವಚ್ಚ ವಾಗಿಟ್ಟುಕೊಳ್ಳುವ ಮೂಲಕ ಕ್ಷಯ ರೋಗವನ್ನು ನಿವಾರಿಸಲು ಸಾಧ್ಯವಿದೆ. ರೋಗಿಳನ್ನು ದೂರವಿಡುವ ಬದಲು ಅವರ ರೋಗ ನಿವಾರಣೆಗೆ ಸೇವಾಂಜಲಿ ಸಂಸ್ಥೆಯಂತೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಶ್ರೇಷ್ಠವಾದ ಕಾರ್ಯ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೋಮವಾರ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಕ್ಷಯರೋಗಿಗಳಿಗೆ ದವಸಧಾನ್ಯಯುಕ್ತ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯು ಸಂಶೋಧನಾ ವಿದ್ಯಾರ್ಥಿ ಡಾ. ಮಹಮ್ಮದ್ ಬಿಲಾಲ್ ಪಾಷ ಮಾತನಾಡಿ ಔಷಧಿಗಿಂತ ಹೆಚ್ಚಿನ ಶಕ್ತಿ ಪೌಷ್ಟಿಕಾಹಾರ ನೀಡುತ್ತದೆ. ಸೇವಾಂಜಲಿ ಸಂಸ್ಥೆ ದಾನಿಗಳ ಸಹಕಾರ ಪಡೆದು ಕ್ಷಯರೋಗಿಗಳಿಗೆ ನೀಡುವ ಆಹಾರವನ್ನು ರೋಗಿಗಳೇ ಸೇವಿಸಿ ರೋಗಮುಕ್ತರಾಗಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಸೇವಾಂಜಲಿಯ ನಾರಾಯಣ ಬಡ್ಡೂರು, ಸಾರಮ್ಮ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ತುಂಬೆ, ಶಿವರಾಜ್ ಸುಜೀರು ಸಹಕರಿಸಿದರು.
Advertisement







