
ಬಂಟ್ವಾಳ :
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೆಪದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುದಾನ ಇಲ್ಲದೆ ಸ್ಥಗಿತಗೊಂಡಿದ್ದು, ಬಹುತೇಕ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯೂ ಕೈಗೆ ಸಿಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ
ಎಂ. ತುಂಗಪ್ಪ ಬಂಗೇರ ಆರೋಪಿಸಿದ್ದಾರೆ.
ಇಲ್ಲಿನ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಎದುರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ವಿರುದ್ದ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು. ಕೊರಗ ಸಮುದಾಯಕ್ಕೆ ನೀಡುತ್ತಿದ್ದ ಪೌಷ್ಟಿಕ ಆಹಾರ ಸಿಗದೆ 8 ತಿಂಗಳು ಕಳೆದಿದೆ.

ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಧನ ವಿತರಣೆಯಲ್ಲಿಯೂ ತಾರತಮ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಸಮಿತಿ ಅಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರು ಮಾತನಾಡಿ, ‘ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹೊರತು ಪಡಿಸಿ ಉಳಿದ ಎಲ್ಲಾ ಯೋಜನೆ ಸ್ಥಗಿತಗೊಂಡಿದೆ. ಮುಖ್ಯಮಂತ್ರಿ ಡಿ. ಕೆ. ಶಿವ ಕುಮಾರ್ ಬೆಳಿಗ್ಗೆ ಘೋಷಿಸಿದ ಯೋಜನೆಗಳು ಸಂಜೆ ವೇಳೆಗೆ ಸ್ಥಗಿತಗೊಳ್ಳುತ್ತಿದೆ. ಹೊಸ ಪಡಿತರ ಚೀಟಿ ನೀಡದೆ 10 ವರ್ಷ ಕಳೆದಿದೆ. ಮಂಗಳೂರಿನಲ್ಲಿ ರೂ 2 ಕೋಟಿ ವೆಚ್ಚದಲ್ಲಿ ನಡೆದ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನವೂ ಶೂನ್ಯ ಸಾಧನೆಯಾಗಿದೆ ಎಂದು ಅವರು ಆರೋಪಿಸಿದರು.

ಉದ್ಯಮಿ ಟಿ. ಹರೀಂದ್ರ ಪೈ ನೈನಾಡು ಮಾತನಾಡಿ, ‘ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಯೋಜನೆ ಅನುಷ್ಠಾನ ಗೊಳಿಸಲು ಸಾಧ್ಯವಾಗದಿದ್ದರೆ ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಲಿ ‘ ಎಂದರು.
ಪ್ರಮುಖರಾದ ಹರೀಶ್ ಶೆಟ್ಟಿ ನೈನಾಡು, ಚಂದ್ರಶೇಖರ ಶೆಟ್ಟಿ, ತಾರಾನಾಥ ಪೂಜಾರಿ ಕಜೆಕಾರು, ಶೇಖರ ಪೂಜಾರಿ ಅಗಲ್ತೊಡಿ, ಕಾಂತಪ್ಪ ಪೂಜಾರಿ,
ಚಂದಪ್ಪ ಕಜೆಕಾರು, ರವಿಶಂಕರ ಹೊಳ್ಳ, ಶಶಿಧರ ನಾಯ್ಕ, ಸತೀಶ್ ಕೊರಗ, ಶೇಷಗಿರಿ ಪೂಜಾರಿ, ರಮೇಶ ಶೆಟ್ಟಿ ಮಜಲೋಡಿ, ಯಶೋಧರ್, ನಾರಾಯಣ ಪೂಜಾರಿ, ಜಯಶ್ರೀ, ಸುಶೀಲ ಮಮತಾ ಮತ್ತಿತರರು ಇದ್ದರು.
Advertisement







