
ಬಂಟ್ವಾಳ: ಆಹಾರದಲ್ಲಿ ಶುದ್ದತೆಯ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು, ಆಹಾರ ಸುರಕ್ಷತೆಯ ದೃಷ್ಟಿಯಿಂದ ಅಧಿಕೃತವಾದ ನಿಯಮ, ರೂಪುರೇಷೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಕ್ಯಾಟರಿಂಗ್ ಮಾಲಕರ ಸಂಘದ ಸಲಹೆ ಅಗತ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ಪದಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಜನಸಾಮಾನ್ಯರಿಗೆ ಬೇಕಾದ ಆಹಾರ ವ್ಯವಸ್ಥೆಯನ್ನು ನೀಡುವ ಕಾರ್ಯ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ಕ್ಯಾಟರಿಂಗ್ ವ್ಯವಸ್ಥೆ ಚೆನ್ನಗಿದ್ದರೆ ಆ ಕಾರ್ಯಕ್ರಮವೇ ಚೆನ್ನಗಿದ್ದಂತೆ. ಸಭೆಯನ್ನು ಸುಧಾರಿಸಿಕೊಂಡು ಹೋಗುವ ಶಕ್ತಿಯನ್ನು ದೇವರು ಕ್ಯಾಟರಿಂಗ್ ಉದ್ದಿಮೆದಾರರಿಗೆ ನೀಡಿದ್ದಾರೆ. ಜಿಲ್ಲೆಯ ಕ್ಯಾಟರಿಂಗ್ ಉದ್ಯಮಕ್ಕೆ ಒಳ್ಳೆಯ ಹೆಸರಿದೆ. ಒಗ್ಗಟ್ಟಿನ ಕ್ಯಾಟರಿಂಗ್ ಸಂಘಟನೆ ನಮ್ಮ ಜಿಲ್ಲೆಯಲ್ಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಕುಂಬಾರ ಗುಡಿಕೈಗಾರಿಕೆಯ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಮಾತನಾಡಿ ರುಚಿಕರ ಆಹಾರ ತಯಾರಿಸುವುದರ ಜೊತೆಗೆ ಗುಣಮಟ್ಟ, ಸಮಯಪಾಲನೆ, ಹಾಗೂ ಸೇವಾ ಮನೋಭಾವನೆಯಿಂದ ಕೆಲಸಮಾಡುವುದು ನಮ್ಮ ಧರ್ಮ ಎನ್ನುವ ರೀತಿಯಲ್ಲಿ ಕ್ಯಾಟರಿಂಗ್ ಸಂಸ್ಥೆಯವರು ಕಾರ್ಯ ನಿರ್ವಹಿಸುತ್ತಾರೆ. ಪರಸ್ಪರ ಪೈಪೋಟಿ ಮಾಡದೆ ಆರೋಗ್ಯ ಪೂರ್ಣ ಹಾಗೂ ಶುಚಿತ್ವವನ್ನು ಕಾಪಾಡಿ ಕೊಂಡು ಎಲ್ಲರೂ ಏಕರೂಪದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಸಂಘದಿಂದ ಸಾಧ್ಯವಿದೆ ಎಂದರು.


ಸಂಘದ ಜಿಲ್ಲಾಧ್ಯಕ್ಷ ಹರೀಶ್ ಶೆಟ್ಟಿ ಎತಮೊಗರು ದೊಡ್ಡಮನೆ ಮಾತನಾಡಿ ಕ್ಯಾಟರಿಂಗ್ ಮಾಲಕರು ಅನ್ನದಾತರು. ಜಿಲ್ಲೆಯಲ್ಲಿ ಯುವಕರಿಗೆ ಕೆಲಸ ಕೊಟ್ಟವರು ಕ್ಯಾಟರಿಂಗ್ ಮಾಲಕರು. ಶುಭ ಕಾರ್ಯಕ್ರಮಗಳು ಯಶಸ್ವಿಯಾಗಲು ಕ್ಯಾಟರಿಂಗ್ ನವರೂ ಕಾರಣ ಎಂದರು.
ನೂತನ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಮಾತನಾಡಿ ಮುಂದಿನ ತನ್ನ ಅಧ್ಯಕ್ಷಾವಧಿಯಲ್ಲಿ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಸಂಘದ ಅಧ್ಯಕ್ಷ ವಲೇರಿಯನ್ ಲೋಬೋ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಕ್ಯಾಟರಿಂಗ್ ಮಾಲಕರೆಂದರೆ ಯಾರನ್ನು ಬಿಟ್ಟುಕೊಡದೆ ಸಹಕಾರ ನೀಡುವವರು. ಇದು ಸಾರ್ಥಕತೆಯಿಂದ ಸೇವೆ ಸಲ್ಲಿಸುವ ಸಂಸ್ಥೆ. ಈ ಸಂಸ್ಥೆಯಲ್ಲಿ ಇದ್ದುಕೊಂಡು ಸೇವೆ ಮಾಡಲು ಅವಕಾಶ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರಾಗಿ ಚೆನ್ನಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಡಿಸೋಜ, ಕೋಶಾಧಿಕಾರಿಯಾಗಿ ಜೈಸನ್ ಸಿಕ್ವೇರಾ ಅಧಿಕಾರ ಸ್ವೀಕರಿಸಿದರು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೈದ್ಯಕೀಯ ವಿದ್ಯಾರ್ಥಿನಿ ಆನ್ಸಿಲ್ಲಾ ಪ್ರೀಮಾ ಸಿಕ್ವೇರಾ ಅವರನ್ನು ಅಭಿನಂದಿಸಲಾಯಿತು. ಹೊಸ ಸದಸ್ಯರನ್ನು ವಲಯಕ್ಕೆ ಸೇರ್ಪಡೆಗೊಳಿಸಲಾಯಿತು.

ನಿರ್ಗಮನ ಅಧ್ಯಕ್ಷ ವಲೇರಿಯನ್ ಲೋಬೋ, ಪ್ರಧಾನ ಕಾರ್ಯದರ್ಶಿ ಸದಾನಂದ ಬಿ. ಬಂಗೇರ, ಕೋಶಾಧಿಕಾರಿ ಸಿಲ್ವೆಸ್ಟರ್ ಲಸ್ರಾದೋ ಅವರನ್ನು ಸನ್ಮಾನಿಸಲಾಯಿತು.
ಸ್ಥಾಪಕಾಧ್ಯಕ್ಷ ನಾರಾಯಣ ಸುವರ್ಣ ವೇದಿಕೆಯಲ್ಲಿದ್ದರು. ಸಂಘಟನಾ ಕಾರ್ಯದರ್ಶಿ ಆಂಟನಿ ಸಿಕ್ವೇರಾ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಬಂಗೇರ ವಾರ್ಷಿಕ ವರದಿ ವಾಚಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ನವೀನ್ ಡಿಸೋಜಾ ವಂದಿಸಿದರು, ರಂಗ ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Advertisement







