
ಬಂಟ್ವಾಳ: ಕುಟುಂಬ ಬಂಧುಗಳನ್ನು ಕಳಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ಕಮಲ ಅವರ ಮನೆ ಹಾಗೂ ಮನೆಪರಿಸರವನ್ನು ಬಂಟ್ವಾಳ ತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ನೇತೃತ್ವದಲ್ಲಿ ವಿವಿಧ ಸಂಘಟನೆಯ ಸಮಾನ ಮನಸ್ಕ ಯುವಕರು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿ ಮಾದರಿಯಾದರು.


ಕಳೆದ ಹಲವಾರು ವರ್ಷಗಳಿಂದ ಕಮಲ, ಭಾಗಿ ಮತ್ತವರ ಬಡ ಕುಟುಂಬ ಸರಿಯಾದ ಸೂರಿಲ್ಲದೆ ಜೋಪಡಿ ಮನೆಯಲ್ಲಿ ವಾಸವಾಗಿತ್ತು. ಇದನ್ನು ಮನಗಂಡ ಶೈಲೇಶ್ ಪೂಜಾರಿಯವರು ಎರಡು ವರ್ಷಗಳ ಹಿಂದೆ ತಮ್ಮ ಶೈಲೇಶ್ ಕನ್ಸ್ ಸ್ಟ್ರಕ್ಷನ್ ಮೂಲಕ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದರು. ಕುಟುಂಬ ಸದಸ್ಯರೆಲ್ಲ ನಿಧನ ಹೊಂದಿದ ಬಳಿಕ ಮನೆಯಲ್ಲಿ ಕಮಲ ಅವರು ಏಕಾಂಗಿಯಾಗಿ ವಾಸವಾಗಿದ್ದಾರೆ. ಕೆಲವು ದಿನಗಳ ಹಿಂದೆ ಕಮಲ ಅವರು ಅನಾರೋಗ್ಯಕ್ಕೊಳಗಾಗಿ ಮನೆಯಲ್ಲಿಯೇ ಚಾಪೆಹಿಡಿದ ಸ್ಥಿತಿಯಲ್ಲಿದ್ದಾಗ ಮಾಹಿತಿ ತಿಳಿದ ಶೈಲೇಶ್ ಪೂಜಾರಿ ಯವರು ಮನೆಗೆ ಧಾವಿಸಿ ಕಮಲ ಅವರನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದರು.


ಕಮಲ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಮನೆ ಹಾಗೂ ಮನೆಯ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಉದ್ದೇಶದಿಂದ ಶೈಲೇಶ್ ಅವರು ಶ್ರಮದಾನ ಮಾಡುವ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಅದಕ್ಕೆ ಸ್ಪಂದಿಸಿದ ಸ್ಥಳೀಯ ವಿವಿಧ ಸಂಘಟನೆಯ ಸಮಾನ ಮನಸ್ಕ ಯುವಕರು ಸ್ಪಂದಿಸಿ ಶ್ರಮದಾನದಲ್ಲಿ ಭಾಗಿಯಾದರು. ಮನೆಯ ಸುತ್ತ ಬೆಳೆದಿದ್ದ ಹುಲ್ಲು ತೆರವುಗೊಳಿಸಿ, ಪರಿಸರ ಸ್ವಚ್ಚಗೊಳಿಸಿದರು. ಸ್ಥಳೀಯ ಮಹಿಳೆಯೋರ್ವರು ಕಮಲ ಅವರನ್ನು ಸ್ನಾನ ಮಾಡಿಸಿ ಮಾನವೀಯತೆ ಮರೆದವರು. ಅನಾಥೆಯಾಗಿ ಬದುಕುತ್ತಿರುವ ಶೈಲೇಶ್ ಪೂಜಾರಿ ಮತ್ತವರ ಬಳಗದ ಸೇವಾ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Advertisement







