
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜನ್ಸಿ ಬಂಟ್ವಾಳ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ಆಯ್ದ ಅರ್ಹ 58 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ರೋಟರಿ ಕ್ಲಬ್ ಬಂಟ್ವಾಳದ ಐವತ್ತೆಂಟನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಅರ್ಜುನ್ ಭಂಡಾರ್ಕಾರ್ ಮತ್ತು ಮಂಜುನಾಥ ಆಚಾರ್ಯ ಸಹಯೋಗ ನೀಡಿದ್ದಾರೆ ಎಂದು ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಹೇಳಿದರು.

ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಶುಭ ಹಾರೈಸಿ ಮಾತನಾಡಿ, ಹಿರಿಯರು, ಶಿಕ್ಷಕರು, ಸೈನಿಕರನ್ನು ಗೌರವಿಸಿ. ಸಮಾಜಕ್ಕೆ ಒಳಿತನ್ನು ಮಾಡಿ, ಮುಂಬರುವ ದಿನಗಳಲ್ಲಿ ತಾವು ಪಡೆದುದಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತವನ್ನು ಸಮಾಜಕ್ಕೆ ನೀಡುವಂತಾಗಿ ಎಂದು ಆಶಿಸಿದರು.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ಝೋನ್ ನಿಂದ ಹೊರಬರಲು ಪ್ರಯತ್ನಿಸಬೇಕು. ಸಕರಾತ್ಮಕ ವಿಚಾರಗಳನ್ನು ಹೊಂದಿರಬೇಕು. ಜೀವನದ ಪ್ರತಿ ಕ್ಷಣವೂ ಅಧ್ಯಯನಕ್ಕೆ ಮೀಸಲಾಗಿದ್ದು, ಎಚ್ಚರ, ಪ್ರಯತ್ನಶೀಲರಾಗುವುದರ ಜೊತೆಗೆ ನಿರ್ದಿಷ್ಟವಾದ ಗುರಿ ಸಾಧನೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಮಾಜದ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡಬೇಕು. ಸ್ಕಾಲರ್ ಶಿಪ್ ಪಡೆಯುವುದು ಹಕ್ಕಲ್ಲ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ಎಲ್ಲ ಮಕ್ಕಳನ್ನು ನಾವು ಖುದ್ದಾಗಿ ಭೇಟಿಯಾಗಿ ಅವರ ಹೆತ್ತವರು ಪೋಷಕರನ್ನು ಮಾತನಾಡಿಸಿ, ಸಮಸ್ಯೆಗಳನ್ನು ಆಲಿಸಿದ್ದು, ಅದಕ್ಕನುಸಾರವಾಗಿ ಮೊತ್ತವನ್ನು ನಿಗದಿಪಡಿಸಿ ವಿತರಣೆ ಮಾಡಲಾಗಿದೆ. ಭದ್ರಾ ಗ್ಯಾಸ್ ಸಂಸ್ಥೆಯ ಸಹಕಾರ ಹಾಗೂ ರೋಟರಿ ಕ್ಲಬ್ ಆಯೋಜನೆಯಿಂದಾಗಿ ಇದು ಸಾಧ್ಯವಾಗಿದೆ ಎಂದರು.

ಸಹಪ್ರಾಯೋಜಕರಾದ ಭದ್ರಾ ಗ್ಯಾಸ್ ಏಜನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ, ಭದ್ರಾ ಗ್ಯಾಸ್ ಏಜನ್ಸಿಯ 40ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇಂಟರ್ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ಒಟ್ಟು 5 ಲಕ್ಷ ರೂ ಮೊತ್ತವನ್ನು ಒದಗಿಸಲಾಗಿದೆ ಎಂದರು.ರೋಟರಿ ಸದಸ್ಯರಾದ ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಭಾಗ್ಯಶ್ರೀ ಭಂಡಾರ್ಕರ್ , ರೋಟರಿ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್ ಮುಸ್ತಫಾ ಕಾರ್ಯಕ್ರಮ ನಿರ್ವಹಿಸಿದರು.
Advertisement







