
ಬಂಟ್ವಾಳ: ಒಂದು ಸಾವಿರ ವರ್ಷದ ಬಳಿಕ ಪ್ರಕಟಗೊಂಡಿರುವ ಶ್ರೀ ಸೋಮನಾಥ ಜ್ಯೋತಿರ್ಲಿಂಗವು ಜುಲೈ 14 ರಂದು ಮಂಗಳವಾರ ಬಂಟ್ವಾಳ ತಾಲೂಕಿಗೆ ಆಗಮಿಸಲಿದ್ದು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಮಧುಕರ ಸಭಾಭವನದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವೆರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 7.30ರವೆರೆಗೆ ಭಕ್ತಾದಿಗಳ ದಿವ್ಯವದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ರುದ್ರಪೂಜೆ, ಸತ್ಸಂಗ ಹಾಗೂ ದೇವರ ದರ್ಶನ ಇರಲಿದೆ ಎಂದು ಆರ್ಟ್ ಆಪ್ ಲಿವಿಂಗ್ ಬಂಟ್ಬಾಳ ಘಟಕದ ಶಿಕ್ಷಕರಾದ ಮುರಳೀಕೃಷ್ಣ ಸೋಮಯಾಜಿ, ಶಿವಶಂಕರ್ ರಾವ್ ಹಾಗೂ ರಂಜಿತ್ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದರ ವಿಶೇಷತೆ?
ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವು ಅತ್ಯಂತ ವಿಶೇಷವಾದ ಗುಣವನ್ನು ಹೊಂದಿದ್ದು ಗುರುತ್ವಾಕರ್ಷಣೆಯ ಶಕ್ತಿಯನ್ನು ಮೀರಿ, ನೆಲದಿಂದ ಎರಡು ಅಡಿ ಮೇಲೆ ತೇಲಾಡುತ್ತಿತ್ತು. ವಿಜ್ಞಾನಿಗಳ ಪ್ರಕಾರ ಈ ಲಿಂಗದ ಶಿಲೆಯಲ್ಲಿದ್ದ ಕಾಂತೀಯ ಗುಣದಿಂದಾಗಿ ಇದು ಸಾಧ್ಯವಾಗಿರುವುದು. ಸುಮಾರು ಒಂದು ಸಾವಿರ ವರ್ಷಗಳಿಗೂ ಹಿಂದೆ ಈ ಸೋಮನಾಥ ದೇವಾಲಯದ ಮೇಲೆ ಘಜನಿ ಮೊಹಮ್ಮದನು 17 ಬಾರಿ ಮಾಡಿದ ದಾಳಿಯ ಪರಿಣಾಮವಾಗಿ ದೇವಾಲಯ ಮತ್ತು ಜ್ಯೋತಿರ್ಲಿಂಗ ಎರಡು ಕೂಡಾ ಪೂರ್ತಿಯಾಗಿ ಧ್ವಂಸಗೊಂಡಿದ್ದವು. ಆದರೆ ತುಂಡು ತುಂಡಾಗಿ ಬಿದ್ದಂತಹ ಈ ಜ್ಯೋತಿರ್ಲಿಂಗದ ದೊಡ್ಡ ದೊಡ್ಡ ತುಣುಕುಗಳನ್ನು ಕೆಲವು ಹಿಂದೂ ಭಕ್ತರು ತಮ್ಮ ಸುಪರ್ದಿಗೆ ತೆಗೆದುಕೊಂಡು ಮುಂದಿನ ಪೀಳಿಗೆಗಾಗಿ ಕಾಪಾಡಿಕೊಂಡು ಬಂದಂತಹ ವಿಷಯವು ಅನೇಕರಿಗೆ ತಿಳಿದಿಲ್ಲ.
ಇಂತಹ ವಿಶೇಷ ಭಕ್ತರಲ್ಲಿ ಅಗ್ನಿಹೋತ್ರಿ ವಂಶಸ್ಥರಾಗಿರುವ ಶಾಸ್ತ್ರಿ ಕುಟುಂಬದವರು ಈ ತುಂಡುಗಳನ್ನು ಅಂದವಾದ ಲಿಂಗದ ರೂಪದಲ್ಲಿ ಮಾರ್ಪಡಿಸಿ ವರ್ಷಾನುಗಟ್ಟಲೆ ಇವುಗಳ ಪೂಜೆಯನ್ನು ಮಾಡುತ್ತಾ ಈ ಪವಿತ್ರವಾದ ಲಿಂಗಗಳ ಸಂರಕ್ಷಣೆಯನ್ನು ಮಾಡಿದ್ದಾರೆ. ಶಾಸ್ತ್ರಿಗಳ ಮನೆತನದಿಂದ ಈ ಲಿಂಗಗಳನ್ನು 1924ರಲ್ಲಿ ಹಿಂದಿನ ಕಂಚಿ ಶ್ರೀಗಳಿಗೆ ತೋರಿಸಲಾಗಿತ್ತು. ಶ್ರೀಗಳು ಈ ಲಿಂಗದ ವಿಶೇಷತೆಯನ್ನು ಗಮನಿಸಿ ಇವುಗಳ ಪ್ರತಿಷ್ಠಾಪನೆಗೆ ಇನ್ನೂ ನೂರು ವರ್ಷ ಕಾಯಬೇಕು, ಅಲ್ಲಿಯ ತನಕ ಗುಪ್ತವಾಗಿ ಆ ಮನೆತನದವರೇ ಅರ್ಚಿಸುತ್ತಾ ಬರಬೇಕು ಎಂಬುದಾಗಿ ಅಭಿಪ್ರಾಯಪಟ್ಟಿದ್ದರು. ಈ ಪ್ರಕಾರ ಮುಂದುವರಿದು ಶಾಸ್ತ್ರಿಗಳ ಮನೆತನದ ಇತ್ತೀಚಿನ ವಾರಸುದಾರರಾದ ಸೀತಾರಾಮ ಶಾಸ್ತ್ರಿಯವರು ಈಗಿನ ಕಂಚಿ ಶ್ರೀಗಳನ್ನು ಸಂಪರ್ಕಿಸಿದಾಗ, ಅವರು ಈ ಲಿಂಗವನ್ನು ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರಾಗಿರುವ ಶ್ರೀ ರವಿಶಂಕರ್ ಗುರೂಜಿ ಹಸ್ತಾಂತರಿಸುವಂತೆ ಸೂಚನೆಯನ್ನು ಕೊಟ್ಟರು.
ಶ್ರೀ ರವಿಶಂಕರ್ ಗುರೂಜಿ ಇಡೀ ದೇಶದ ಜನತೆಗೆ ಈ ಜ್ಯೋತಿರ್ಲಿಂಗದ ದರ್ಶನ ಭಾಗ್ಯವನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಅಂತೆಯೇ ಜುಲೈ 13 ರಂದು ಜ್ಯೋತಿರ್ಲಿಂಗ ಮಂಗಳೂರಿಗೆ ಆಗಮಿಸಿ, ಜು.14ರಂದು ಕಲ್ಲಡ್ಕದಲ್ಲಿ ಭಕ್ತರ ದರ್ಶನಕ್ಕೆ ಪ್ರಾಪ್ರವಾಗಲಿದೆ.


Advertisement







